ಕಲಬುರ್ಗಿ, ಡಿ.15- ಪಿಎಸ್‌ಐ ಹುದ್ದೆಗಳ ನೇಮಕಾತಿ ಪರೀಕ್ಷೆಯಲ್ಲಿನ ಅಕ್ರಮ ಹಾಗೂ ಕರ್ನಾಟಕ ಲೋಕಸೇವಾ ಆಯೋಗದಿಂದ ವಿವಿಧ ನಿಗಮಗಳಿಗೆ ನಡೆದ ನೇಮಕಾತಿ ಪರೀಕ್ಷಾ ಅಕ್ರಮಗಳಿಗೆ ಸಂಬAಧಿಸಿದAತೆ ನಗರದಲ್ಲಿ ಪರೀಕ್ಷೆ ನಡೆಸುವುದೇ ಬೇಡ ಎಂಬ ನಿರ್ಧಾರಕ್ಕೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಬಂದಿದೆ. ಬರುವ 2024ರ ಜನವರಿ 13ರಂದು ನಡೆಯಲಿರುವ ಕರ್ನಾಟಕ ರಾಜ್ಯ ಸಹಾಯಕ ಪ್ರಾಧ್ಯಾಪಕರ ಅರ್ಹತಾ (ಕೆಸೆಟ್-2023) ಪರೀಕ್ಷೆಗೆ ನಿಗದಿ ಮಾಡಲಾಗಿರುವ ನಗರದಲ್ಲಿನ ಪರೀಕ್ಷಾ ಕೇಂದ್ರವನ್ನು ರಾಜಧಾನಿ ಬೆಂಗಳೂರಿಗೆ ಸ್ಥಳಾಂತರ ಮಾಡಲಾಗಿದೆ.
ನಗರದಲ್ಲಿ ಕಳೆದ 2021ರಲ್ಲಿ 545 ಪಿಎಸ್‌ಐ ಹುದ್ದೆಗಳ ನೇಮಕಾತಿಗಾಗಿ ನಡೆದ ಪರೀಕ್ಷೆಯಲ್ಲಿ ಭಾರೀ ಅಕ್ರಮ ಆಗಿತ್ತು. ಈ ಸಂಬAಧ ಆರ್.ಡಿ. ಪಾಟೀಲ್, ಶ್ರೀಮತಿ ದಿವ್ಯಾ ಹಾಗರಗಿ ಸೇರಿದಂತೆ ಸುಮಾರು 55ಕ್ಕೂ ಅಧಿಕ ಜನರು ಜೈಲು ಪಾಲಾಗಿದ್ದರು. ಬಳಿಕ ಪಿಎಸ್ಃಐ ನೇಮಕಾತಿ ಅಕ್ರಮ ಪ್ರಕರಣ ಮಾಸುವ ಮುನ್ನವೇ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಇತ್ತೀಚೆಗೆ ನಡೆಸಿದ ವಿವಿಧ ಹುದ್ದೆಗಳ ನೇಮಕತಿ ಪರೀಕ್ಷೆಯಲ್ಲಿಯೂ ವ್ಯಾಪಕ ಅಕ್ರಮ ನಡೆದಿರುವುದು ಬೆಳಕಿಗೆ ಬಂದಿದೆ. ಆ ಹಿನ್ನೆಲೆಯಲ್ಲಿ ನಗರದಲ್ಲಿ ಪರೀಕ್ಷೆ ನಡೆಸದಿರಲು ನಿರ್ಧಾರ ಕೈಗೊಳ್ಳಲಾಗಿದೆ.
ಪರೀಕ್ಷಾ ಕೇಂದ್ರ ಬೆಂಗಳೂರಿಗೆ ವರ್ಗಾವಣೆ ಮಾಡಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಅಧಿಕೃತ ಪ್ರಕಟಣೆ ಹೊರಡಿಸಿದೆ. ಪಕ್ಕದ ವಿಜಯಪುರದಲ್ಲಿನ ಕೇಂದ್ರವನ್ನು ತುಮಕೂರಿಗೆ ಸ್ಥಳಾಂತರಿಸಲಾಗಿದ. ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆಗೆ ಕಲ್ಯಾಣ ಕರ್ನಾಟಕದಿಂದ ಹೆಚ್ಚಿನ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದಾರೆ. ಈಗ ಪರೀಕ್ಷಾ ಕೇಂದ್ರಗಳು ದೂರದ ಬೆಂಗಳೂರಿಗೆ, ತುಮಕೂರಿಗೆ ಸ್ಥಳಾಂತರಿಸಿರುವ ಅಭ್ಯರ್ಥಿಗಳಿಗೆ ತೀವ್ರ ತೊಂದರೆ ಆಗಲಿದೆ. ಸಾವಿರಾರು ರೂ.ಗಳನ್ನು ಖರ್ಚು ಮಾಡಿ ಪರೀಕ್ಷೆ ಎದುರಿಸುವುದು ಅನಿವಾರ್ಯ ಆಗಿದೆ.
ಈಗಾಗಲೇ ಪಿಎಸ್‌ಐ ಮರುಪರೀಕ್ಷೆ ಕೂಡ ಬೆಂಗಳೂರಿನಲ್ಲಿ ನಡೆಸಲು ತೀರ್ಮಾನ ಕೈಗೊಳ್ಳಲಾಗಿದೆ. ಯಾರೋ ಮಾಡಿದ ತಪ್ಪಿಗೆ ಮತ್ತಾರಿಗೋ ಶಿಕ್ಷೆ ಎನ್ನುವ ರೀತಿ ಆಗಿದೆ ಎಂಬ ಬೇಸರವನ್ನು ಅಭ್ಯರ್ಥಿಗಳು ಹೊರಹಾಕಿದ್ದಾರೆ.
ಅಕ್ರಮ ಎಸಗಿದರೆ ಆಸ್ತಿ ಮುಟ್ಟುಗೋಲು: ನೇಮಕಾತಿ ಪರೀಕ್ಷೆಗಳಲ್ಲಿ ನಡೆಯುವ ಅಕ್ರಮಗಳನ್ನು ತಡೆಯಲು ರಾಜ್ಯ ಸರ್ಕಾರ ಪ್ರತ್ಯೇಕ ಕಾಯ್ದೆ ತರಲು ತೀರ್ಮಾನಿಸಿದೆ. ಕಳೆದ ತಿಂಗಳು ಜರುಗಿದ ಸಚಿವ ಸಂಪುಟ ಸಭೆಯಲ್ಲಿ ಕರ್ನಾಟಕ ಪಬ್ಲಿಕ್ ಎಕ್ಸಾಮಿನೇಷನ್ (ನೇಮಕಾತಿಯಲ್ಲಿ ಭ್ರಷ್ಟಾಚಾರ ಮತ್ತು ಅನ್ಯಾಯದ ವಿರುದ್ಧ ತಡೆಗಟ್ಟುವಿಕೆ ಕ್ರಮಗಳು) ವಿಧೇಯಕ 2023ಕ್ಕೆ) ಅನುಮೋದನೆ ನೀಡಲಾಗಿತ್ತು.
ಕರ್ನಾಟಕ ಪಬ್ಲಕಿಕ್ ಎಕ್ಸಾಮಿನೇಷನ್ ವಿಧೇಯಕ 2023ರಲ್ಲಿ ಕಠಿಣ ಕಾನೂನುಗಳನ್ನು ರೂಪಿಸಲಾಗಿದೆ. ವಿಧೇಯಕದಲ್ಲಿ ಅಕ್ರಮ ಎಸಗಿದವರ ಮೇಲೆ ಕಠಿಣ ಸೆರೆಮನೆವಾಸ ಹಾಗೂ ಬೃಹತ್ ದಂಡ ವಿಧಿಸುವ ನಿಯಮ ಸೇರಿಸಲಾಗಿದೆ. ಒಂದು ವೇಳೆ ಪರೀಕ್ಷಾರ್ಥಿ ಕಾನೂನು ಬಾಹಿರ ಕೃತ್ಯದಲ್ಲಿ ತೊಡಗಿರುವುದು ದೃಢಪಟ್ಟರೆ ಅಂತಹ ಅಪರಾಧಿಗೆ ಗರಿಷ್ಠ ಐದು ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸುವ ನಿಯಮ ರೂಪಿಸಲಾಗಿದೆ.
ಹತ್ತು ಲಕ್ಷ ರೂ.ಗಳಿಗೂ ಕಡಿಮೆ ಇಲ್ಲದಂತೆ ದಂಡ ವಿಧಿಸುವ ನಿಯಮ ಜಾರಿಗೆ ತರಲಾಗಿದೆ. ದಂಡ ಕಟ್ಟಲು ವಿಫಲವಾದರೆ 9 ತಿಂಗಳು ಜೈಲು ಶಿಕ್ಷೆ ವಿಧಿಸಲಾಗುವುದು. ವಿಧೇಯಕದಲ್ಲಿ ಪ್ರಮಖವಾಗಿ ತಪ್ಪಿತಸ್ಥನ ಆಸ್ತಿ ಮುಟ್ಟುಗೋಲಿನ ವಿಷಯವನ್ನು ಸೇರಿಸಲಾಗಿದೆ.