ಹಲ್ಲೆ ಪ್ರಕರಣ ಮುಚ್ಚಿಹಾಕಲು ಪೋಲಿಸರಿಂದ ಕಟ್ಟುಕಥೆ: ಸಿಬಿಐ ತನಿಖೆಗೆ ಮಣಿಕಂಠ್ ರಾಠೋಡ್ ಒತ್ತಾಯ

0
937

ಕಲಬುರ್ಗಿ, ಡಿ.9- ಶಂಕರವಾಡಿ ಸೇತುವೆಯ ಬಳಿ ನನ್ನ ಮೇಲಿನ ಹಲ್ಲೆ ಪ್ರಕರಣವನ್ನು ಮುಚ್ಚಿ ಹಾಕಲು ಪೋಲಿಸರು ಸುಳ್ಳು ಸಾಕ್ಷಿಗಳನ್ನು ಸೃಷ್ಟಿಸಿ ನನ್ನ ಮೇಲೆ ಇಲ್ಲದ ಆರೋಪವನ್ನು ಹೊರಿಸಿದ್ದಾರೆ. ತಮ್ಮದೇ ಪೆನ್ನು, ತಮ್ಮದೇ ಹಾಳಿಯ ಮೂಲಕ ಜಿಲ್ಲಾ ಉಸ್ತುವಾರಿ ಸಚಿವರ ಕೈಗೊಂಬೆಯಾಗಿ ಪೋಲಿಸರು ವರ್ತಿಸಿದ್ದಾರೆ. ಹೀಗಾಗಿ ಇಡೀ ಪ್ರಕರಣದ ಕುರಿತು ಸಿಬಿಐ ತನಿಖೆಗೆ ಒಪ್ಪಿಸಬೇಕು ಎಂದು ಬಿಜೆಪಿ ಮುಖಂಡ ಮಣಿಕಂಠ್ ರಾಠೋಡ್ ಅವರು ಒತ್ತಾಯಿಸಿದರು.

ನಗರದ ಪತ್ರಿಕಾ ಭವನದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಗುರುವಾರ ನನ್ನ ಬಂಧನದ ಸಮಯದಲ್ಲಿಯೂ ಸಹ ವಾಸ್ತವಿಕ ಸಂಗತಿಗಳನ್ನು ಮುಚ್ಚಿಟ್ಟು, ತಮಗೆ ಬೇಕೆನಿಸಿದ ರೀತಿಯಲ್ಲಿ ಬಂಧನದ ವಾರೆಂಟ್ ಹೊರಡಿಸಿದ್ದಾರೆ. ಇದು ಮೊದಲಿನ ಯುಗವಲ್ಲ. ಈಗ ಡಿಜಿಟಲ್ ಯುಗವಾಗಿದೆ. ನನಗೆ ಯಾವಾಗ ಬಂಧಿಸಿದರು, ಎಲ್ಲಿಗೆ ಕರೆದುಕೊಂಡು ಹೋದರು, ಅನಗತ್ಯವಾಗಿ ಪೋಲಿಸ್ ವಾಹನದಲ್ಲಿ ಕರೆದುಕೊಂಡು ಹೋಗಿದ್ದು, ಪೋಲಿಸ್ ಠಾಣೆಯಲ್ಲಿ ರಾತ್ರಿ ಹತ್ತು ಗಂಟೆಯವರೆಗೆ ಸುದೀರ್ಘ ಅವಧಿಯವರೆಗೆ ಕೂಡಿಸಿದ್ದು, ಶೌಚಾಲಯಕ್ಕೂ ಸಹ ಹೋದರೂ ಅಲ್ಲಿಗೆ ಪೋಲಿಸರು ಆಗಮಿಸಿದ್ದು, ಕೈಯಲ್ಲಿನ ಮೊಬೈಲ್ ಕಸಿದುಕೊಂಡರು. ನನಗೆ ಆ ಸಂದರ್ಭದಲ್ಲಿ ಯಾವುದೇ ವಿಚಾರಣೆ ಮಾಡಿಲ್ಲ. ತನಿಖೆಯನ್ನೂ ಕೈಗೊಳ್ಳಲಿಲ್ಲ. ರಾತ್ರಿ ಚಿತ್ತಾಪುರ ತಹಸಿಲ್ದಾರ್ ಮುಂದೆ ಹಾಜರುಪಡಿಸಿ ಜೈಲಿಗೆ ಹಾಕಿದ್ದು ಮುಂತಾದವುಗಳನ್ನೆಲ್ಲ ನಾನು ಸಾಮಾಜಿಕ ಜಾಲತಾಣಗಳ ಮೂಲಕ ಬಹಿರಂಗಪಡಿಸಿದ್ದೇನೆ ಎಂದರು.

ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳು ಕರ್ತವ್ಯದಲ್ಲಿದ್ದರೂ ಸಹ ಸಚಿವ ಪ್ರಿಯಾಂಕ್ ಖರ್ಗೆ ಅವರ ಹುಟ್ಟುಹಬ್ಬದ ಅಂಗವಾಗಿ ಕ್ರಿಕೆಟ್ ಪಂದ್ಯದಲ್ಲಿ ಟಾಸ್ ಹಾರಿಸುವುದು ಮತ್ತು ಬ್ಯಾಟಿಂಗ್ ಮಾಡುವುದರ ಕುರಿತು ನಾನು ವಿಡಿಯೋ ಹಾಕಿದ್ದರಿಂದ ವರಿಷ್ಠಾಧಿಕಾರಿಗಳು ಘಟನೆ ಆಗಿ 18 ದಿನಗಳ ನಂತರ ಸುಳ್ಳು ಸಾಕ್ಷಿಗಳನ್ನು ಸೃಷ್ಟಿಸಿ ನನ್ನ ಮೇಲಿನ ಹಲ್ಲೆ ಪ್ರಕರಣವನ್ನು ಮುಚ್ಚಿ ಹಾಕಲು ಯತ್ನಿಸಿದ್ದಾರೆ ಎಂದು ಅವರು ದೂರಿದರು.
ಚಪೇಟ್ಲಾ ಬಳಿ ಕಾರು ಅಪಘಾತವಾಗಿದ್ದು ನನ್ನ ಪತ್ನಿಯ ಹೆಸರಿನಲ್ಲಿದೆ. ಅಪಘಾತವಾಗಿದ್ದು ಡಿಸೆಂಬರ್ 20ರಂದು ಆ ಕಾರಿನ ವಿಮೆ ಮಾಡಿಸಿದ್ದು ಹೈದ್ರಾಬಾದ್ ಕಂಪೆನಿ. ಹೀಗಾಗಿ ಅಪಘಾತಕ್ಕೀಡಾದ ಕಾರನ್ನು ಹೈದ್ರಾಬಾದ್‌ಕ್ಕೆ ತೆಗೆದುಕೊಂಡು ಹೋಗಲಾಗಿದೆ. ನನ್ನ ಕಾರುಗಳಿಗೆ ಸಮಸ್ಯೆ ಆದರೆ ನಾನು ಹೈದ್ರಾಬಾದ್‌ನಲ್ಲಿಯೇ ದುರಸ್ತಿ ಮಾಡಿಸುವೆ. ಆದಾಗ್ಯೂ, ಆ ಅಪಘಾತದ ಕಾರನ್ನು ಮುಂದಿಟ್ಟುಕೊAಡು ನನಗೆ ಸಂಬAಧ ಇರಲಾರದವರ ಸಾಕ್ಷಿಗಳನ್ನು ಸುಳ್ಳು ಸೃಷ್ಟಿ ಮಾಡಿದ್ದಾರೆ. ನನ್ನ ಮೇಲೆ ಹಲ್ಲೆಯಾಗಿದ್ದು 18ರಂದು. ಅಪಥಾತವಾಗಿದ್ದು 20ರಂದು. ಹೀಗಾಗಿ ಪೋಲಿಸರ ಸುಳ್ಳು ದಾಖಲೆ ಸೃಷ್ಟಿಯು ಮೇಲ್ನೋಟಕ್ಕೆ ಸಾಬೀತಾಗುತ್ತದೆ ಎಂದು ಅವರು ದಾಖಲೆಯ ಮೂಲಕ ವಿವರಿಸಿದರು.
ಸಚಿವ ಪ್ರಿಯಾಂಕ್ ಖರ್ಗೆಯವರು ಯಾವುದೇ ಪ್ರಜ್ಞೆ ಇರಲಾರದೇ, ಆಧಾರವಿಲ್ಲದೇ ಬೆಳಗಾವಿಯ ಸುವರ್ಣ ಸೌಧದಲ್ಲಿ ನನ್ನ ಹಾಗೂ ನನ್ನ ಪಕ್ಷದ ನಾಯಕರ ವಿರುದ್ಧ ಕಿಡಿಕಾರಿದ್ದಾರೆ. ಮೊಟ್ಟ ಮೊದಲನೇಯದಾಗಿ ನನ್ನ ವಿರುದ್ಧ ಸುಳ್ಳು ಆರೋಪಗಳನ್ನು ಮಾಡಿ 33 ಪ್ರಕರಣಗಳನ್ನು ದಾಖಲಿಸಲಾಗಿದೆ. ಸಚಿವರು ತಮ್ಮ ಪುಡಾರಿಗಳನ್ನು ಬಿಟ್ಟು ಪ್ರಕರಣ ದಾಖಲಿಸಿದ್ದಾರೆ ಎಂದು ಆಕ್ರೋಶ ಹೊರಹಾಕಿರುವ ಅವರು, ನನ್ನ ಮೇಲೆ ಅಕ್ಕಿ ಕಳ್ಳ ಎಂದು ಸಚಿವ ಖರ್ಗೆಯವರು ಸುಳ್ಳು ಆರೋಪ ಮಾಡುತ್ತಿದ್ದಾರೆ. ಆದಾಗ್ಯೂ, ನನ್ನ ಮೇಲೆ ಹಾಕಿರುವ ಸುಳ್ಳು ಇಸಿ ಆಕ್ಟ್ ಕಾಯ್ದೆ ಪ್ರಕರಣಗಳನ್ನು ಉಚ್ಛ ನ್ಯಾಯಾಲಯದಲ್ಲಿ ಸುಳ್ಳು ಎಂದು ಪರಿಗಣಿಸಿ ಬಿಡುಗಡೆ ಮಾಡಲಾಗಿದೆ. ಸಣ್ಣ ಮಕ್ಕಳ ಹಾಲಿನ ಪೌಡರ್ ಕುರಿತು ಪದೇ ಪದೇ ಸಚಿವರು ಮಾತನಾಡುತ್ತಾರೆ. ಆ ಪ್ರಕರಣಕ್ಕೂ ಯಾದಗಿರಿ ಜಿಲ್ಲಾ ಸತ್ರ ನ್ಯಾಯಾಲಯವು ತಡೆಯಾಜ್ಞೆ ನೀಡಿದೆ ಎಂದು ಅವರು ಸ್ಪಷ್ಟಪಡಿಸಿದರು.
ಸಚಿವ ಪ್ರಿಯಾಂಕ್ ಖರ್ಗೆಯವರು ಥರ್ಡ್ ಕ್ಲಾಸ್ ಎಂದು ಟೀಕಿಸಿ ನನಗೆ ಬಹುದೊಡ್ಡ ಬಹುಮಾನ ಕೊಟ್ಟಿದ್ದಾರೆ. ಅದು ಅವರ ತಂದೆ ಮಲ್ಲಿಕಾರ್ಜುನ್ ಖರ್ಗೆ ಅವರ ಕೊಡುಗೆ. ಖರ್ಗೆಯವರು ಏಳು ಬಾರಿ ಗುರುಮಿಠಕಲ್ ಕ್ಷೇತ್ರದಲ್ಲಿ ಶಾಸಕರಾಗಿದ್ದರು. ಆ ಕ್ಷೇತ್ರದವನೇ ನಾನಾಗಿದ್ದೇನೆ. ಕ್ಷೇತ್ರದಲ್ಲಿ ಒಂದೇ ಒಂದು ಸಿಬಿಎಸ್‌ಸಿ ಸ್ಕೂಲ್ ಆರಂಭಿಸಲಿಲ್ಲ. ಡಿಪ್ಲೋಮಾ ಕಾಲೇಜು ಸ್ಥಾಪಿಸಲಿಲ್ಲ. ಉದ್ಯೋಗ ಒದಗಿಸುವ ಕೈಗಾರಿಕೆಗಳನ್ನು ಸಹ ತರಲಿಲ್ಲ. ಇದರಿಂದಾಗಿ ಗುಣಮಟ್ಟದ ಶಾಲೆಗಳಿಲ್ಲದ ಶಿಕ್ಷಣದಿಂದ ವಂಚಿತರಾಗಿ ಬಡವರು, ಅದರಲ್ಲಿಯೂ ಲಂಬಾಣಿ ಸಮಾಜದವರು ಗುಳೆ ಹೋಗುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಅವರು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು.
ನಾನು ಕ್ಷೇತ್ರದಲ್ಲಿ ಸಿಬಿಎಸ್‌ಸಿ ಸ್ಕೂಲ್ ಆರಂಭಿಸಬೇಕೆAದರೆ ಅದಕ್ಕೂ ಅಡ್ಡಿ. ವ್ಯಾಪಾರ, ವಹಿವಾಟು ಮಾಡಬೇಕಾದರೂ ಅಡ್ಡಿ. ಈಗ ರಾಜಕೀಯಕ್ಕೆ ಬಂದರೂ ಸಹ ನನಗೆ ರಾಜಕೀಯವಾಗಿ ಮುಗಿಸಲು ನನ್ನ ವಿರುದ್ಧ ಸುಳ್ಳು ಪ್ರಕರಣಗಳನ್ನು ದಾಖಲಿಸಿ, ಜೈಲಿಗೆ ಕಳಿಸುತ್ತಿದ್ದಾರೆ. ಇಂತಹ ಸುಳ್ಳು ಪ್ರಕರಣಗಳಿಗೆ ಮತ್ತು ಜೈಲಿಗೆ ಹೋಗುವುದಕ್ಕೆ ನಾನು ಹಿಂಜರಿಯಲಾರೆ. ನನಗೆ ಸಂವಿಧಾನದ ಮೇಲೆ ಮತ್ತು ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರ ಮೇಲೆ ನಂಬಿಕೆ ಇದೆ. ನ್ಯಾಯಾಲಯವು ಕೊಟ್ಟ ತೀರ್ಮಾನಗಳನ್ನೂ ಸಹ ಗೌರವಿಸುತ್ತಿಲ್ಲ. ಬಾಯಿಗೆ ಬಂದAತೆ ಮಾತನಾಡುತ್ತಿದ್ದಾರೆ. ಇದನ್ನು ನಾನು ಸಹಿಸಿಕೊಳ್ಳುವುದಿಲ್ಲ. ಅಧಿಕಾರ ಶಾಶ್ವತ ಅಲ್ಲ. ನಾವೂ ಮುಂದೆ ಅಧಿಕಾರಕ್ಕೆ ಬರುತ್ತೇವೆ. ಆ ಸಂದರ್ಭದಲ್ಲಿ ಕಾಂಗ್ರೆಸ್ಸಿನವರAತೆ ಸೇಡಿನ ರಾಜಕಾರಣ ಮಾಡುವುದಿಲ್ಲ. ಬದಲಾಗಿ ಸುಳ್ಳು ಪ್ರಕರಣ ದಾಖಲಿಸುವಂತಹ ದುರಾಡಳಿತಕ್ಕೆ ಕೊನೆ ಹಾಡುತ್ತೇವೆ ಎಂದು ಅವರು ಎಚ್ಚರಿಸಿದರು.
ಕಳೆದ ಗುರುವಾರದಂದು ನನಗೆ ವಾಡಿ ಠಾಣೆಯ ಪೋಲಿಸರು ಬಂಧಿಸಿ ಚಿತ್ತಾಪುರ ತಹಸಿಲ್ದಾರ್ ಮುಂದೆ ಹಾಜರುಪಡಿಸಿದ್ದಾಗಿ ನನಗೆ ಲಿಖಿತವಾಗಿ ಕೊಟ್ಟಿದ್ದಾರೆ. ನನಗೆ ವಾಡಿ ಠಾಣೆಯ ಪಿಎಸ್‌ಐ ಮುಖವನ್ನೇ ನೋಡಿಲ್ಲ. ಅವರ ಪರಿಚಯವೂ ಇಲ್ಲ. ನನಗೆ ನನ್ನ ಮನೆಯಲ್ಲಿ ಅಂದು ಬೆಳಿಗ್ಗೆ 8-30ಕ್ಕೆ ಪೋಲಿಸರು ಬಂದು ಘೇರಾವ್ ಹಾಕಿದರು. ನಿಮಗೆ ಜೀವ ಭಯ ಇದೆ. ರಕ್ಷಣೆಗಾಗಿ ಬಂದಿದ್ದೇವೆ ಎಂದು ಹೇಳಿದರು. ಬೆಳಿಗ್ಗೆ 11-30ಕ್ಕೆ ಸುದ್ದಿಗೋಷ್ಠಿಯಿರುವುದನ್ನು ಕಂಡು ಇನ್ನು ಪತ್ರಿಕೆಯವರು ಬರುತ್ತಾರೆ ಎಂದುಕೊAಡು ಪೋಲಿಸರು ಮನೆಯೊಳಗೆ ನುಗ್ಗಿ ಮಕ್ಕಳು ಹಾಗೂ ಪತ್ನಿಯ ಮುಂದೆಯೇ ನನಗೆ ಎತ್ತಿಹಾಕಿಕೊಂಡು ಬಂದರು. ಕಾಲಲ್ಲಿ ಚಪ್ಪಲಿಗಳನ್ನು ಹಾಕಿಕೊಳ್ಳುವುದಕ್ಕೂ ಬಿಟ್ಟಿಲ್ಲ ಎಂದು ಅವರು ಆಕ್ರೋಶ ಹೊರಹಾಕಿದರು.
ನನಗೆ ಫರತಾಬಾದ್ ಪೋಲಿಸ್ ಠಾಣೆಗೆ ಕರೆದೊಯ್ದು ಬೆಳಿಗ್ಗೆ 11-30ರಿಂದ ರಾತ್ರಿ 10-30ರವರೆಗೆ ವಿನಾಕಾರಣ ಕುಳ್ಳಿರಿಸಿದರು. ಠಾಣೆಯಲ್ಲಿ ಶೌಚಾಲಯಕ್ಕೆ ಒಬ್ಬಂಟಿಯಾಗಿ ಹೋಗಲು ಬಿಡದೇ ಅಲ್ಲಿಗೂ ಪೋಲಿಸರು ಬಂದರು. ನನ್ನ ಮೊಬೈಲ್ ಕಸಿದುಕೊಂಡರು. ರಾತ್ರಿ ಚಿತ್ತಾಪುರ ತಹಸಿಲ್ದಾರರ ಮುಂದೆ ಹಾಜರುಪಡಿಸಿ ಜೈಲಿಗೆ ಕಳಿಸಿದರು. ವಾಡಿ ಠಾಣೆಯವರು ನನ್ನ ವಿರುದ್ಧ ಯಾವುದೇ ಕಾನೂನು ಕ್ರಮ ಕೈಗೊಂಡಿಲ್ಲ. ಬೇರೆ ಠಾಣೆಯ ಪೋಲಿಸರೇ ಎಲ್ಲವನ್ನೂ ಮಾಡಿದ್ದಾರೆ. ಆ ದಾಖಲಾತಿ ನನ್ನಲ್ಲಿದೆ. ಅದನ್ನು ನ್ಯಾಯಾಲಯದಲ್ಲಿ ಪ್ರಸ್ತುತಪಡಿಸುವೆ. ಸತ್ಯ ಒಂದಿಲ್ಲೊAದು ದಿನ ಹೊರಬರಲಿದೆ. ಎಲ್ಲ ಸಾಕ್ಷಾಧಾರಗಳು ಇವೆ. ಸಚಿವರಿಗೆ ಹೆದರಿ ಅವರ ಪರ ಕಾರ್ಯನಿರ್ವಹಿಸುವ ಪೋಲಿಸರಿಗೂ ಸಹ ಇದರಿಂದ ತೊಂದರೆ ಆಗುತ್ತದೆ ಎಂದು ಅವರು ಹೇಳಿದರು.
ಚಿತ್ತಾಪುರ ಕ್ಷೇತ್ರದಲ್ಲಿ ಅಕ್ರಮ ಮರಳು ಸಾಗಣೆ ರಾಜಾರೋಷವಾಗಿ ನಡೆಯುತ್ತಿದೆ. ಪೋಲಿಸರೇ ಮುಂದೆ ನಿಂತು ಅಕ್ರಮ ಎಸಗುತ್ತಿದ್ದಾರೆ. ಆ ಕುರಿತು ದೂರು ಸಲ್ಲಿಸಿದರೆ ನನ್ನ ದೂರು ಸ್ವೀಕರಿಸದೇ ನಾನು ಹಪ್ತಾ ವಸೂಲಿ ಮಾಡುತ್ತಿದ್ದೇನೆ ಎಂದು ನನ್ನ ವಿರುದ್ಧವೇ ಸುಳ್ಳು ಪ್ರಕರಣ ದಾಖಲಿಸಿದರು. ಗುಂಡಗುರ್ತಿ ದೇವಾನಂದ್ ಎಂಬ ಕೋಲಿ ಸಮಾಜದ ಯುವಕನ ಆತ್ಮಹತ್ಯೆ ಪ್ರಕರಣ ಖಂಡಿಸಿ ನಾನು ಹೋರಾಟ ಮಾಡಲು ಮುಂದಾದಾಗ ಅದನ್ನು ತಡೆಯಲು ನನಗೆ ಅನಾವಶ್ಯಕವಾಗಿ ಪೋಲಿಸರು ಮನೆಗೆ ನುಗ್ಗಿ ಬಂಧಿಸಿಕೊAಡು ಹೋದರು. ವಾಡಿಯಲ್ಲಿ ಮಾಜಿ ಶಾಸಕ ದಿ. ವಾಲ್ಮೀಕಿ ನಾಯಕ್ ಅವರ ಅಳಿಯ ರಮೇಶ್ ಪವಾರ್ ಅವರು ಎಸಿಸಿ ಸಿಮೆಂಟ್ ಕಂಪೆನಿಯ ಆಡಳಿತ ಮಂಡಳಿಯ ಕಿರುಕುಳ ನೀಡುತ್ತಿದ್ದುದನ್ನು ಖಂಡಿಸಿ ನಾವು ಹೋರಾಟ ಮಾಡಿದೆವು. ಅದಕ್ಕೂ ಸಹ ಕ್ರಮ ಕೈಗೊಳ್ಳದೇ ಇದ್ದುದರಿಂದ ಮತ್ತೆ ಹೋರಾಟಕ್ಕೆ ಮುಂದಾದಾಗ ಪೋಲಿಸರು ತಡೆದರು. ಒಂದು ವೇಳೆ ಹೋರಾಟಕ್ಕೆ ಅವಕಾಶ ಮಾಡಿಕೊಟ್ಟಿದ್ದರೆ ರಮೇಶ್ ಪವಾರ್ ಅವರು ಆತ್ಮಹತ್ಯೆ ಮಾಡಿಕೊಳ್ಳುತ್ತಿರಲಿಲ್ಲ. ಆತನ ಆತ್ಮಹತ್ಯೆಗೆ ಪೋಲಿಸರೇ ನೇರ ಕಾರಣ ಎಂದು ಮಣಿಕಂಠ್ ರಾಠೋಡ್ ಅವರು ಗಂಭೀರ ಆರೋಪ ಮಾಡಿದರು.
ನನ್ನ ಮೇಲೆ ಹಲ್ಲೆಯಾಗಿದ್ದು ಆ ಕುರಿತು ದಾಖಲೆಗಳನ್ನು ಸಹ ಕೊಟ್ಟಿದ್ದೇನೆ. ರಾಜ್ಯ ವಿಧಾನಸಭೆಯಲ್ಲಿನ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರು ಸಹ ನನಗೆ ಭೇಟಿಯಾಗಿದ್ದಾರೆ. ಆ ಸಂದರ್ಭದಲ್ಲಿಯೂ ಸಹ ನಾನು ಪ್ರಕರಣ ಮುಚ್ಚಿಹಾಕುತ್ತಾರೆ. ಆದ್ದರಿಂದ ಸಿಬಿಐ ಇಲ್ಲವೇ ಸಿಓಡಿಗೆ ಒಪ್ಪಿಸಲು ಕೋರಿದ್ದೇನೆ. ಹೀಗಾಗಿ ಕೂಡಲೇ ರಾಜ್ಯ ಸರ್ಕಾರವು ಪ್ರಕರಣವನ್ನು ಸಿಬಿಐಗೆ ಒಪ್ಪಿಸಬೇಕು ಎಂದು ಅವರು ಒತ್ತಾಯಿಸಿದರು. ಸುದ್ದಿಗೋಷ್ಠಿಯಲ್ಲಿಬಿಜೆಪಿ ಮುಖಂಡ ನೀಲಕಂಠ್ ಪಾಟೀಲ್, ವಿಜಯಕುಮಾರ್ ಗುಂಡಗುರ್ತಿ, ಕಾರಿನ ಚಾಲಕ ಶ್ರೀಕಾಂತ್ ಸುಲೇಗಾಂವ್, ಮಹೇಶ್ ಮುಂತಾಧವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here