ಸಚಿವ ಪ್ರಿಯಾಂಕ್ ಖರ್ಗೆ ಕರ್ನಾಟಕದ ವಿಶೇಷ ಹುಡುಗಾಟದ ಮಗು: ಸಂಸದ ಡಾ. ಜಾಧವ್ ಗೇಲಿ

0
762

ಕಲಬುರ್ಗಿ, ಅ.21- ರಾಜ್ಯದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯಿತಿರಾಜ್ ಹಾಗೂ ಐಟಿಬಿಟಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಕರ್ನಾಟಕದ ವಿಶೇಷ ಹುಡುಗಾಟದ ಮಗು ಎಂದು ಬಿಜೆಪಿ ಸಂಸದ ಡಾ. ಉಮೇಶ್ ಜಾಧವ್ ಅವರು ಗೇಲಿ ಮಾಡಿದರು.
ಶನಿವಾರ ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಚಿವ ಪ್ರಿಯಾಂಕ್ ಖರ್ಗೆ ಅವರು ಮೊದಲು ಗೆದ್ದಾಗ ಅವರಿಗೆ ಸಚಿವ ಸ್ಥಾನ ಕೊಡಲಾಯಿತು. ಎರಡು ತಿಂಗಳ ನಂತರ ಅವರಿಗೆ ಐಟಿಬಿಟಿ ಖಾತೆಯನ್ನು ನೀಡಲಾಯಿತು. ಎರಡನೇ ಬಾರಿ ಗೆದ್ದಾಗ ಅವರಿಗೆ ಸಮಾಜ ಕಲ್ಯಾಣ ಇಲಾಖೆಯನ್ನು ಕೊಡಲಾಯಿತು. ಮೂರನೇ ಬಾರಿಗೆ ಗೆದ್ದಾಗ ಅವರಿಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯಿತಿರಾಜ್, ಐಟಿಬಿಟಿ ಖಾತೆಯನ್ನು ಕೊಡಲಾಗಿದೆ. ಐಟಿಬಿಟಿ ಖಾತೆ ಸಚಿವ ಎಂ.ಬಿ. ಪಾಟೀಲ್ ಅವರಿಂದ ಕಸಿದುಕೊಂಡಿದ್ದಾರೆ. ಅದಕ್ಕಾಗಿ ಅವರು ಕರ್ನಾಟಕದ ವಿಶೇಷ ಮಗು ಎಂದು ಲೇವಡಿ ಮಾಡಿದರು.
ಮಾಜಿ ಸಚಿವ ರೇವು ನಾಯಕ್ ಬೆಳಮಗಿ ಮತ್ತು ಅಫಜಲಪುರದ ಹಿರಿಯ ಶಾಸಕ ಎಂ.ವೈ. ಪಾಟೀಲ್ ಅವರನ್ನು ಎಡ ಮತ್ತು ಬಲ ಬದಿಯಲ್ಲಿ ಕುಳ್ಳಿರಿಸಿಕೊಂಡು ಮಧ್ಯೆ ತಾವು ಕುಳಿತು ಪ್ರಿಯಾಂಕ್ ಖರ್ಗೆಯವರು ಸುದ್ದಿಗೋಷ್ಠಿ ಮಾಡುತ್ತಾರೆ. ಹೀಗಾಗಿ ಅವರು ವಿಶೇಷ ಮಗು ಎಂದು ಅವರು ಪರೋಕ್ಷವಾಗಿ ಜರಿದರು.
ಸಚಿವ ಪ್ರಿಯಾಂಕ್ ಖರ್ಗೆ ಅವರು ಅತ್ಯಂತ ಬಾಲಿಶತನದಿಂದ ವರ್ತಿಸುತ್ತಿದ್ದಾರೆ ಎಂದು ಟೀಕಿಸಿದ ಸಂಸದ ಡಾ. ಜಾಧವ್ ಅವರು, ಪ್ರಧಾನಿ ನರೇಂದ್ರ ಮೋದಿ ಅವರಿಗೂ ಮತ್ತು ತಮಗೂ ಪ್ರಿಯಾಂಕ್ ಅವರು ಹೋಲಿಕೆ ಮಾಡಿಕೊಂಡಿದ್ದಾರೆ. ಮೋದಿ ಅವರು ವಿದೇಶಕ್ಕೆ ಹೋದರೆ ಅವರು ವಿಶ್ವನಾಯಕ ಆಗುತ್ತಾರೆ. ನಾನು ಅಮೇರಿಕಕ್ಕೆ ಹೋದರೆ ಟೀಕೆ ಮಾಡುತ್ತಾರೆ ಎಂಬ ಪ್ರಿಯಾಂಕ್ ಖರ್ಗೆಯವರಿಗೆ ಅವರಿಗಿಂತ ಸೂಪರ್ ಆಗಿ. ಅದಕ್ಕೆ ನಮ್ಮದೇನೂ ತಕರಾರಿಲ್ಲ ಎಂದು ಛೇಡಿಸಿದರು.
ಕರ್ನಾಟಕದಲ್ಲಿ ತೀವ್ರ ಬರಗಾಲ ಬಿದ್ದಿದೆ. ವಿದ್ಯುತ್ ಹಾಗೂ ಕುಡಿಯುವ ನೀರಿನ ಸಮಸ್ಯೆ ಹೆಚ್ಚುತ್ತಿದೆ. ಇಂತಹ ಸಂದರ್ಭದಲ್ಲಿ ಪ್ರಗತಿ ಪರಿಶೀಲನಾ ಸಭೆ ಮಾಡಬೇಕು ಎಂದು ನಾನು ಆಗ್ರಹಿಸಿದ್ದೆ. ಅದಕ್ಕೆ ಪ್ರಿಯಾಂಕ್ ಖರ್ಗೆ ಅವರು ನ್ಯಾಯಾಲಯಕ್ಕೆ ಹೋಗು ಎಂದು ಹೇಳುತ್ತಾರೆ ಎಂದು ಆಕ್ಷೇಪಿಸಿದ ಡಾ. ಜಾಧವ್ ಅವರು, ನಾನೇಕೆ ನ್ಯಾಯಾಲಯಕ್ಕೆ ಹೋಗಲಿ. ಸಭೆ ಮಾಡುವುದು ಅವರ ಕರ್ತವ್ಯ. ನೀವು ಕೆಡಿಪಿ ಸಭೆಯನ್ನು ಮಾಡಬೇಕು. ನಮ್ಮ ಹಿಂದಿನ ಸರ್ಕಾರದಲ್ಲಿ ಮಾಡಿರುವ ಕೆಡಿಪಿ ಸಭೆಗಳ ಕುರಿತು ಹಾಗೂ ಹಾಲಿ ಕಾಂಗ್ರೆಸ್ ಸರ್ಕಾರದ ಕೆಡಿಪಿ ಸಭೆಗಳ ಕುರಿತು ವಿವರಣೆಯನ್ನು ಖರ್ಗೆ ನೀಡುತ್ತಾರೆ. ಪ್ರಿಯಾಂಕ್ ಖರ್ಗೆ ಅವರು ಕೆಡಿಪಿ ಸಭೆಯನ್ನೇ ಮಾಡಿಲ್ಲ ಎಂದು ಒಪ್ಪಿಕೊಂಡಿದ್ದಾರೆ. 43 ಸಭೆಗಳನ್ನು ಮಾಡಿದ್ದೇನೆ ಎಂದು ಹೇಳಿದ್ದಾರೆ. ಆನ್‌ಲೈನ್ ಮೂಲಕ ಸಭೆ ಮಾಡಿದರೆ ಉಪಯೋಗ ಏನು?, ಕೆಡಿಪಿ ಸಭೆ ಆದರೆ ಎಲ್ಲ ಶಾಸಕರು, ಅಧಿಕಾರಿಗಳು ಬರುತ್ತಾರೆ. ಮಾಧ್ಯಮದವರೂ ಸಹ ಉಪಸ್ಥಿತರಿರುತ್ತಾರೆ. ಹಗಾಗಾಗಿ ಕೆಡಿಪಿ ಸಭೆಯನ್ನು ಮಾಡಿ ಎಂದು ಒತ್ತಾಯಿಸಿರುವೆ ಎಂದು ತಮ್ಮ ಬೇಡಿಕೆಯನ್ನು ಮತ್ತೆ ಸಮರ್ಥಿಸಿಕೊಂಡರು.
ಸಚಿವ ಪ್ರಿಯಾಂಕ್ ಖರ್ಗೆಯವರು ನನಗೆ ಜಾಧವ್ ಎಂದು ಮಾತನಾಡುತ್ತಾರೆ. ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರೂ ಸಹ ನನಗೆ ಅತ್ಯಂತ ಪ್ರೀತಿಯಿಂದ ಜಾಧವ್ ಎಂದೇ ಕರೆಯುತ್ತಾರೆ ಎಂದು ತಿರುಗೇಟು ನೀಡಿದರಲ್ಲದೇ, ಮುಖ್ಯಮಂತ್ರಿಗಳು ಜನಸ್ಪಂದನಾ ಸಭೆಯನ್ನು ಜಿಲ್ಲಾ ಕೇಂದ್ರದಲ್ಲಿ ಮಾಡಲು ಆದೇಶಿಸಿದ್ದರು. ಆದಾಗ್ಯೂ, ಸಚಿವ ಪ್ರಿಯಾಂಕ್ ಖರ್ಗೆ ಅವರು ಚಿಂಚೋಳಿಯಲ್ಲಿ ಮಾಡಿದರು. ಅದೂ ಹೈದ್ರಾಬಾದ್ ಸಮೀಪ ಆಗುತ್ತಿದ್ದು, ಬೇಗ ಅಲ್ಲಿಂದ ಹೋಗಲು ಅನುಕೂಲವಾಗುತ್ತದೆ ಎಂಬ ಉದ್ದೇಶದಿಂದ ಅಲ್ಲಿ ಮಾಡಿದರು. ಇಂತಹ ತಾಲ್ಲೂಕಿನಲ್ಲಿ ಜನಸ್ಪಂದನಾ ಸಭೆಯು ಗದಗ್ ಜಿಲ್ಲೆ ಹೊರತುಪಡಿಸಿದರೆ ಕಲಬುರ್ಗಿ ಜಿಲ್ಲೆಯಲ್ಲಿ ಆಗಿದೆ ಎಂದು ಅವರು ಟೀಕಿಸಿದರು.
ನನಗೆ ಚಿಂಚೋಳಿ ಎಂಪಿ ಎಂದು ಪ್ರಿಯಾಂಕ್ ಖರ್ಗೆ ಅವರು ಕರೆಯುತ್ತಾರೆ. ಅದಕ್ಕೆ ನನಗೆ ಹೆಮ್ಮೆ ಇದೆ. ನನ್ನ ಹುಟ್ಟೂರು ಅದು. ನನ್ನ ಊರಿನ ಕುರಿತು ಮಾತನಾಡಿದರೆ ನನಗೆ ಗೌರವ ಹೆಚ್ಚುತ್ತದೆ. ಪ್ರಿಯಾಂಕ್ ಖರ್ಗೆ ಬೆಂಗಳೂರು ಡಾಲರ್ಸ್ ಕಾಲೋನಿಯ ಸಚಿವ ಎಂದು ಎಂದು ಕುಟುಕಿದ ಅವರು, ಜನಸ್ಪಂದನಾ ಸಭೆಯಲ್ಲಿ ಜಾಧವ್ ಮಗನಿದ್ದ, ಬೇಕಾದರೆ ಅವರನ್ನೇ ಕೇಳಿ ಎಂದು ಪ್ರಿಯಾಂಕ್ ಖರ್ಗೆ ವಿಡಂಬನಾತ್ಮಕವಾಗಿ ಹೇಳಿಕೆ ನೀಡುತ್ತಾರೆ. ಜನಸ್ಪಂದನಾ ಸಭೆಯಲ್ಲಿ ನನ್ನ ಮಗ ಇದ್ದರೂ ಸಹ ಆ ಕ್ಷೇತ್ರದ ಶಾಸಕ ಎಂಬುದನ್ನು ಸಚಿವರು ಮರೆಯಬಾರದು ಎಂದು ಪರೋಕ್ಷ ಅಸಮಾಧಾನ ವ್ಯಕ್ತಪಡಿಸಿದರು.
ಚಿತ್ತಾಪುರ, ಕಲಬುರ್ಗಿ ಕುರಿತು ಕಾಳಜಿ ಇಲ್ಲ. ಬೆಂಗಳೂರಿನಲ್ಲಿ ವೈದ್ಯಕೀಯ ಕಾಲೇಜು ಮಾಡುತ್ತಾರೆ. ಆದಾಗ್ಯೂ, ಅವರ ತಂದೆ ಸ್ವಾತಂತ್ರö್ಯ ಸಿಕ್ಕಾಗಿನಿಂದ ಕಲಬುರ್ಗಿ ಆಳುತ್ತಿದ್ದಾರೆ. ನೀವು ಅಮೇರಿಕಾಗಾದ್ರೋ ಹೋಗಿ, ಎಲ್ಲಿಗಾದ್ರೂ ಹೋಗಿ. ಆದಾಗ್ಯೂ, ಸುಮ್ನೆ ಹೋಗಿ ಬರಬೇಡಿ. ಬಂಡವಾಳದಾರರನ್ನು ಕರೆತನ್ನಿ. ನೀವು ಅಮೇರಿಕಾಕ್ಕೆ ಹೋದರೆ ನಮಗೇನೂ ಬ್ಯಾನಿ ಇಲ್ಲ. ಆದಾಗ್ಯೂ, ಕಲಬುರ್ಗಿಯನ್ನು ಗಮನದಲ್ಲಿಟ್ಟುಕೊಳ್ಳಿ ಎಂದು ಜಾಧವ್ ಅವರು ಬುದ್ದಿವಾದ ಹೇಳಿದರು.
ನಾನು ಜಿಲ್ಲಾ ಉಸ್ತುವಾರಿ ಸಚಿವನಾದ ಮೇಲೆ ಸಂಸದರು ಕ್ರಿಯಾಶೀಲರಾಗಿದ್ದಾರೆ ಎಂಬ ಪ್ರಿಯಾಂಕ್ ಖರ್ಗೆ ಅವರ ಟೀಕೆಯನ್ನು ಉಲ್ಲೇಖಿಸಿದ ಜಾಧವ್ ಅವರು, ಹೌದು ನಾನು ಕ್ರಿಯಾಶೀಲನಾಗಿದ್ದೇನೆ. ಈ ಹಿಂದೆ ಕಾಂಗ್ರೆಸ್ಸಿನಲ್ಲಿದ್ದಾಗಲೂ ಕ್ರಿಯಾಶೀಲನಾಗಿ ಮೂರು ಬಾರಿ ಶಾಸಕನಾಗಿದ್ದೆ. ಆ ಪಕ್ಷದಲ್ಲಿ ನಾನು ಕ್ರಿಯಾಶೀಲವಾಗಿದ್ದರಿಂದಲೇ ಮುಂದೆ ಎಲ್ಲಿ ತಮಗೆ ಸಮಸ್ಯೆ ಆಗುತ್ತದೆ ಎಂದುಕೊAಡು ನನಗೆ ಆ ಪಕ್ಷದಿಂದ ಹೊರಹಾಕಿದರು. ಈಗಲೂ ಸಹ ನಾನು ಕ್ರಿಯಾಶೀಲವಾಗಿದ್ದು, ಇದು ಸಹ ಅವರಿಗೆ ಸಮಸ್ಯೆಯಾಗುತ್ತದೆ ಎಂಬ ಭೀತಿ ಅವರಿಗೆ ಕಾಡುತ್ತಿದೆ ಎಂದು ಅವರು ಕಟಿಕಿಯಾಡಿದರು.
ಓ ನನ್ನ ಪ್ರೀತಿಯ ಪ್ರಿಯಾಂಕ್ ಖರ್ಗೆಜಿ ನಿಜವಾಗಲೂ ರಾಜಕಾರಣಿ ಆಗಿದ್ರೆ, ನಿನ್ನೆ ನೀವು ನಗರದ ಫಿಲ್ಟರ್ ಬೆಡ್ ಆಶ್ರಯ ಕಾಲೋನಿಗೆ ಹೋಗಬೇಕಾಗಿತ್ತು. ಬಡವರ ಕಷ್ಟ ನಿಮಗೆ ಗೊತ್ತಿಲ್ಲ. ನನಗೆ ಗೊತ್ತು, ನಾನು ಹೋಗಿದ್ದೇನೆ. ಯಾವುದೇ ನೋಟಿಸ್ ನೀಡದೇ 44 ಬಡ ಕುಟುಂಬಗಳ ಮನೆಗಳನ್ನು ಕೆಡವಿದ್ರಿ, ಮಾತೆತ್ತಿದರೆ ಜಾಧವ್ ಅಂತೀರಾ, ಬಹುಶ: ಕನಸಿನಲ್ಲೂ ನನಗೆ ನೆನಪಿಸಿಕೊಳ್ಳುತ್ತೀರಿ ಅನಿಸುತ್ತೆ. ಅವರ ತಂದೆ ದಿಶಾ ಕಮಿಟಿ ಸಭೆ ಮಾಡಬೇಕಾಗಿತ್ತು. ದಿಶಾ ಸಭೆ ಆಗಿ ಹಲವು ತಿಂಗಳು ಕಳೆದಿವೆ. ಸಭೆ ಯಾಕೆ ಮಾಡಿಲ್ಲ. ಪಶ್ವಿಮ್ ಬಂಗಾಳ್ ಸಂಸ್ಕೃತಿ ಬಿಡಿ, ಅಭಿವೃದ್ಧಿ ಮಾಡಿ ಎಂದು ಅವರು ಕಿಡಿಕಾರಿದರು.
ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ, ಪ್ರಿಯಾಂಕ್ ಖರ್ಗೆ ಜಿಲ್ಲಾ ಉಸ್ತುವಾರಿ ಸಚಿವರಾದ ಮೇಲೆ ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟು ಹೋಗಿದೆ. ಚಿತ್ತಾಪುರ ತಾಲ್ಲೂಕಿನಲ್ಲಿ ಬಸವಣ್ಣನವರ ಭಾವಚಿತ್ರಕ್ಕೆ ಅಪಮಾನವಾಗಿದೆ. ಅದೇ ತಾಲ್ಲೂಕಿನಲ್ಲಿ ದೇವಾನಂದ್ ಎಂಬ ಯುವಕನ ಆತ್ಮಹತ್ಯೆ ಪ್ರಕರಣಕ್ಕೆ ಪ್ರೇರಣೆ ನೀಡಿದ ಘಟನೆ ಆಗಿದೆ. ಜೇವರ್ಗಿ ತಾಲ್ಲೂಕಿನ ಹುಲ್ಲೂರ್ ಚೆಕ್‌ಪೋಸ್ಟ್ ಬಳಿ ಅಕ್ರಮ ಮರಳು ಸಾಗಾಟ ಪ್ರಕರಣದಲ್ಲಿ ಅಮಾಯಕನಿಗೆ ಗುಂಡು ಹಾರಿಸಲಾಗಿದೆ. ಚಿಂಚೋಳಿ ತಾಲ್ಲೂಕಿನಲ್ಲಿ ಬಿಜೆಪಿ ಕಾರ್ಯಕರ್ತ ಶಿವಕುಮಾರ್ ಆತ್ಮಹತ್ಯೆ ಪ್ರಕರಣದಲ್ಲಿ ಸಚಿವ ಶರಣಪ್ರಕಾಶ್ ಪಾಟೀಲ್ ಅವರ ಹೆಸರು ಕೇಳಿಬಂದಿದೆ. ಸೇಡಂ ತಾಲ್ಲೂಕಿನಲ್ಲಿ ಅಮಾಯಕರ ಮೇಲೆ ಅಟ್ರಾಸಿಸಿ ಪ್ರಕರಣ ದಾಖಲಿಸಲಾಗಿದೆ. ಅಫಜಲಪುರ ತಾಲ್ಲೂಕಿನಲ್ಲಿ ಒಂದು ವಾರದಲ್ಲಿ ಎರಡು ಬರ್ಬರ ಕೊಲೆಗಳಾಗಿವೆ. ಹೀಗೆ ಅಪರಾಧಿ ಚಟುವಟಿಕೆಗಳನ್ನು ನಿಯಂತ್ರಿಸುವಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಅವರು ಗಂಭೀರ ಆರೋಪಗಳನ್ನು ಮಾಡಿದರು. ಸುದ್ದಿಗೋಷ್ಠಿಯಲ್ಲಿ ರಾಜ್ಯ ವಿಧಾನ ಪರಿಷತ್ ಮಾಜಿ ಸದಸ್ಯ ಅಮರನಾಥ್ ಪಾಟೀಲ್, ಬಿಜೆಪಿ ಗ್ರಾಮಾಂತರ ಜಿಲ್ಲಾ ಘಟಕದ ಅಧ್ಯಕ್ಷ ಶಿವರಾಜ್ ಪಾಟೀಲ್ ರದ್ದೇವಾಡಗಿ, ಮಹಾನಗರ ಪಾಲಿಕೆಯ ಮಾಜಿ ಸದಸ್ಯ ವಿಠಲ್ ಜಾಧವ್ ಮುಂತಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here