ಬೆಂಗಳೂರು, ಮಾ. 16:ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಕೊಡ ಮಾಡುವ ಕೆಯುಡಬ್ಲ್ಯುಜೆ ದತ್ತಿ ಪ್ರಶಸ್ತಿ ಪ್ರದಾನ ಸಮಾರಂಭವು ಮಾರ್ಚ್ 18, ಶನಿವಾರ ಬೆಳಗ್ಗೆ 10.35ಕ್ಕೆ ಮೈಸೂರು ಅಗ್ರಹಾರದ ರಾಜೇಂದ್ರ ಕಲಾಮಂದಿರದಲ್ಲಿ ನಡೆಯಲಿದೆ.
ಈ ಕುರಿತು ಕೆಯುಡ್ಲೂö್ಯಜಿ ರಾಜ್ಯಾಧ್ಯಕ್ಷರಾದ ಶಿವಾನಂದ ತಗಡೂರು ಅವರು ಗುರುವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿ, ಸಾಂಸ್ಕೃತಿಕ ನಗರಿಯಲ್ಲಿ ಈ ಕಾರ್ಯಕ್ರಮವನ್ನು ಇದೇ ಮೊದಲ ಬಾರಿಗೆ ಸಂಘಟಿಸಲಾಗಿದೆ. ಕಳೆದ ಬಾರಿ ಶಿವಮೊಗ್ಗದಲ್ಲಿ ಈ ಕಾರ್ಯಕ್ರಮ ನಡೆದಿತ್ತು ಎಂದು ಹೇಳಿದರು.
ಮೈಸೂರು ಜಿಲ್ಲಾ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಸಹಕಾರದಲ್ಲಿ ನಡೆಯಲಿರುವ ಈ ಕಾರ್ಯಕ್ರಮವನ್ನು ಹೈಕೋರ್ಟ್ ವಿಶ್ರಾಂತ ನ್ಯಾಯಮೂರ್ತಿ ಎಚ್.ಎನ್. ನಾಗಮೋಹನ ದಾಸ್ ಅವರು ಉದ್ಘಾಟಿಸಿ, ಪ್ರಶಸ್ತಿಗಳನ್ನು ಪ್ರಧಾನ ಮಾಡುವರು.
ಔಟ್ಲುಕ್ ಮಾಜಿ ಸಂಪಾದಕ ಕೃಷ್ಣಪ್ರಸಾದ್ ಅವರು ದಿಕ್ಸೂಚಿ ಭಾಷಣ ಮಾಡುವರು. ಮೈಸೂರು ಜಿಲ್ಲಾಧ್ಯಕ್ಷ ಎಸ್.ಟಿ. ರವಿಕುಮಾರ್ ಪ್ರಾಸ್ತಾವಿಕ ವಾಗಿ ಮಾತನಾಡುವರು ಎಂದರು
ವಿಜಯವಾಣಿ ಸಂಪಾದಕ ಕೆ.ಎನ್. ಚನ್ನೇಗೌಡ ಮತ್ತು ಹಿರಿಯ ಪತ್ರಕರ್ತ ಜಿ.ಎನ್. ಮೋಹನ್ ಅವರು ಮುಖ್ಯಅತಿಥಿಗಳಾಗಿ ಆಗಮಿಸುವರು. ಮೈಸೂರು ಮಹಾನಗರಪಾಲಿಕೆಯ ಮೇಯರ್ ಶಿವಕುಮಾರ್ ಗೌರವ ಅತಿಥಿಗಳಾಗಿರುವರು.
ಶಾಸಕ ಎಸ್.ಎ. ರಾಮದಾಸ್, ಮೈಸೂರಿನ ಉದ್ಯಮಿ ಎಂ. ರಾಜೇಂದ್ರ, ಮೈಸೂರು ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಸಿ. ನಾರಾಯಣಗೌಡ ಉಪಸ್ಥಿತರಿರುವರು.
28 ಪ್ರಶಸ್ತಿ ಪ್ರದಾನ:
ಕೆಯುಡಬ್ಲ್ಯೂಜೆ ಹೆಸರಿನಲ್ಲಿರುವ ವಿವಿಧ ದತ್ತಿ ಪ್ರಶಸ್ತಿಯನ್ನು ಇದೇ ಸಂದರ್ಭದಲ್ಲಿ ಪ್ರದಾನ ಮಾಡಲಾಗುವುದು. ಇದರಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಪ್ರಶಸ್ತಿ, ಗೊಮ್ಮಟ ಮಾಧ್ಯಮ ಪ್ರಶಸ್ತಿ, ಡಿವಿಜಿ ಪ್ರಶಸ್ತಿ, ಯಶೋದಮ್ಮ ಜಿ ನಾರಾಯಣ ಪ್ರಶಸ್ತಿ ಸೇರಿವೆ ಎಂದರು.
ಮೈಸೂರಿನಲ್ಲಿ ನಡೆಯುವ ದತ್ತಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ನಾಡಿನ ಉದ್ದಗಲಕ್ಕೂ ಹಿರಿಯ ಕಿರಿಯ ಪತ್ರಕರ್ತರು ಭಾಗವಹಿಸಲಿದ್ದಾರೆ ಎಂದರು.
ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಸಹಯೋಗದೊಂದಿಗೆ ಕಾರ್ಯಕ್ರಮ ನಡೆಯಲಿದೆ ಎಂದು ಹೇಳಿದರು.
ಆಹ್ವಾನ ಪತ್ರಿಕೆ ಬಿಡುಗಡೆ:
ಕೆಯುಡಬ್ಲ್ಯೂಜೆ ಸಭಾಂಗಣದಲ್ಲಿ ದತ್ತಿ ಪ್ರಶಸ್ತಿ ಪ್ರದಾನ ಸಮಾರಂಭದ ಆಹ್ವಾನ ಪತ್ರಿಕೆಯನ್ನು ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಬಿಡುಗಡೆ ಮಾಡಿದರು. ಪ್ರಧಾನ ಕಾರ್ಯದರ್ಶಿ ಜಿ.ಸಿ.ಲೋಕೇಶ್ , ಬೆಂಗಳೂರು ನಗರ ಘಟಕದ ಪದಾಧಿಕಾರಿಗಳು ಹಾಜರಿದ್ದರು .