ಚಿತ್ತಾಪೂರ, ಜ. 18:ಬಿಜೆಪಿ ಸರ್ಕಾರ ಚಿತ್ತಾಪುರ ಕ್ಷೇತ್ರಕ್ಕೆ ಬಿಡುಗಡೆಯಾಗಬೇಕಿದ್ದ ರೂ 200 ಕೋಟಿ ಅನುದಾನ ವಾಪಸ್ ಪಡೆಯುವ ಮೂಲಕ ಮಲತಾಯಿ ಧೋರಣೆ ಅನುಸರಿಸುತ್ತಿದೆ ಎಂದು ಶಾಸಕರಾದ ಪ್ರಿಯಾಂಕ್ ಖರ್ಗೆ ಆರೋಪಿಸಿದರು.
ಬೊಮ್ಮನಹಳ್ಳಿ ಗ್ರಾಮದಲ್ಲಿ ಸಿಸಿ ರಸ್ತೆ ಹಾಗೂ ಚರಂಡಿ ನಿರ್ಮಾಣ ಅಂದಾಜು ವೆಚ್ಚ ರೂ 10.29 ಲಕ್ಷ, 248 ಮನೆಗಳಿಗೆ ನಳ ಸಂಪರ್ಕ ಕಲ್ಪಿಸುವುದು ಅಂದಾಜು ವೆಚ್ಚ ರೂ 95.80 ಲಕ್ಷ ಹಾಗೂ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಹೆಚ್ಚುವರಿ ಕೋಣೆ ನಿರ್ಮಾಣ ಅಂದಾಜು ವೆಚ್ಚ ರೂ 76 ಲಕ್ಷ. ಹೀಗೆ ಒಟ್ಟು ರೂ 1.82 ಕೋಟಿ ವೆಚ್ಚದ ಕಾಮಗಾರಿಗಳಿಗೆ ಅಡಿಗಲ್ಲು ನೆರವೇರಿಸಿ ಅವರು ಮಾತನಾಡುತ್ತಿದ್ದರು.
ಕ್ಷೇತ್ರಕ್ಕೆ ಅನುದಾನದ ಕೊರತೆಯ ನಡುವೆಯೂ ಕ್ಷೇತ್ರದ ಅಭಿವೃದ್ದಿಗೆ ಸಾಕಷ್ಟು ಶ್ರಮಿಸಿದ್ದೇನೆ. ಈ ಸರ್ಕಾರ ನಿಗಮಗಳ ಬಗ್ಗೆ ನಿರ್ಲಕ್ಷ್ಯ ಧೋರಣೆ ತೋರುತ್ತಿದೆ. ವಿದ್ಯಾರ್ಥಿಗಳಿಗೆ,ಹಿಂದುಳಿದವರಿಗೆ ಈ ಸರ್ಕಾರ ಅನ್ಯಾಯ ಮುಂದುವರೆಸಿದೆ. ನಮಗೆ ನ್ಯಾಯಯುತವಾಗಿ ಬರಬೇಕಾದ ಅನುದಾನ ಬಿಡುಗಡೆ ಮಾಡಿಲ್ಲ ಹೀಗಾದರೇ ಅಭಿವೃದ್ದಿ ಹೇಗೆ ಸಾಧ್ಯ ? ನಮ್ಮ ಸರ್ಕಾರವೂ ಅಧಿಕಾರದಲ್ಲಿತ್ತು ಆಗಲೂ ನಾವು ಬಿಜೆಪಿ ಶಾಸಕರ ಕ್ಷೇತ್ರಗಳಿಗೆ ಸಾಕಷ್ಟು ಅನುದಾನ ಬಿಡುಗಡೆ ಮಾಡಿದ್ದೇವೆ. ಆದರೆ ನಮಗೆ ಮಾತ್ರ ಅನ್ಯಾಯವಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಬಿಜೆಪಿಗರು ಹತಾಶರಾಗಿದ್ದಾರೆ. ಗುತ್ತಿಗೆದಾರರ ಪ್ರತಿಭಟನೆ ನಡೆಯುತ್ತಿದೆ. ಸರ್ಕಾರದ ಕೆಲಸವಾಗಬೇಕಾದರೆ 40% ಕಮಿಷನ್ ನೀಡಲೇಬೇಕು ಎಂದು ಹೇಳಲಾಗುತ್ತಿದೆ. ಬಿಜೆಪಿ ಶಾಸಕರೊಬ್ಬರು ಒಂದು ವರ್ಷದಲ್ಲೇ ಒಂದು ಕೋಟಿ ಕಮಿಷನ್ ತೆಗೆದುಕೊಂಡಿದ್ದಾರೆ. ಇಂತಹ ಭ್ರಷ್ಟ ವ್ಯವಸ್ಥೆಯ ವಿರುದ್ದ ಗುತ್ತಿಗೆದಾರರು ಸಿಡಿದೆದ್ದಿದ್ದಾರೆ. ಅವರಿಗೆ ನೀಡಬೇಕಾದ ರೂ 25,000 ಕೋಟಿ ಬಿಲ್ ಬಾಕಿ ಇದೆ. ಹಾಗದರೆ ಅಭಿವೃದ್ದಿ ಸಾಧ್ಯನಾ ? ಎಂದು ಪ್ರಶ್ನಿಸಿದರು.
ಸರ್ಕಾರದ ಭ್ರಷ್ಟಾಚಾರ ಕುರಿತು ಬಿಜೆಪಿಯ ನಾಯಕರೇ ಬಾಯಿಬಿಡುತ್ತಿದ್ದಾರೆ. ಅವರವರೇ ಕಚ್ಚಾಟ ಪ್ರಾರಂಭಿಸಿದ್ದಾರೆ. ನಿರಾಣಿ ದಂಧೆ ಮಾಡುತ್ತಿದ್ದಾರೆ ಎಂದು ಯತ್ನಾಳ ಹೇಳಿದ್ದರೆ, ಯತ್ನಾಳ ತನ್ನ ಕಾರು ಚಾಲಕನ ಹತ್ಯೆಯ ಬಗ್ಗೆ ಮಾತನಾಡಿದ್ದಾರೆ. ಇದನ್ನು ಗಮನಿಸಿದರೆ ಸರ್ಕಾರ ಹಾಗೂ ಬಿಜೆಪಿ ನಾಯಕರು ಯಾವ ಲೆವೆಲ್ ಗೆ ಇಳಿದಿದ್ದಾರೆ ಎನ್ನುವುದು ತಿಳಿಯುತ್ತದೆ ಎಂದು ಖರ್ಗೆ ಟೀಕಿಸಿದರು.
ಕೆಎಎಸ್ ಸೇರಿದಂತೆ ಸ್ಪರ್ಧಾತ್ಮಕ ಪರೀಕ್ಷೆ ಬರೆಯಲು ಬೆಂಗಳೂರಿಗೆ ಹೋಗಿರುವ ನಮ್ಮ ಭಾಗದ ಯುವಕರು ಒಂದು ವಾಟ್ಸಪ್ ಗ್ರೂಪ್ ಮಾಡಿಕೊಂಡು ಬೆಂಗಳೂರಿನಲ್ಲಿ ಮದುವೆ ಮುಂಜಿ ಮುಂತಾದ ಕಾರ್ಯಕ್ರಮಗಳು ಎಲ್ಲಿ ನಡೆಯುತ್ತಿವೆ ಎಲ್ಲಿ ಉಚಿತ ಊಟ ಸಿಗುತ್ತಿದೆ ಎನ್ನುವ ಮಾಹಿತಿ ಶೇರ್ ಮಾಡಿಕೊಂಡು ಊಟ ಮಾಡಿ ಅಷ್ಟೊಂದು ಕಷ್ಟಪಟ್ಟು ಓದುತ್ತಿದ್ದರೆ ಸರ್ಕಾರ ಹುದ್ದೆಗಳನ್ನು ಮಾರಾಟಕ್ಕಿಟ್ಟು ಕಷ್ಟಪಟ್ಟು ಓದುತ್ತಿರುವ ಜೀವನದ ಜತೆ ಚೆಲ್ಲಾಟವಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಚಿತ್ತಾಪುರ ತಾಲೂಕಿನ ನಿರುದ್ಯೋಗಿ ಯುವಕರಿಗೆ ಉದ್ಯೋಗ ಕೊಡಿಸುವ ಕನಸಿನೊಂದಿಗೆ ಪ್ರಾರಂಭಿಸಬೇಕು ಎಂದುಕೊAಡಿದ್ದ ನಿಮ್ಝ್ ಯೋಜನೆ ಈ ಸರ್ಕಾರ ಹಾಳು ಮಾಡಿದೆ. ಕೃಷಿ ಕೂಲಿ ಕಾರ್ಮಿಕರು ಸಂಕಟದಲ್ಲಿದ್ದಾರೆ. ನೆಟೆ ರೋಗದ ಹೊಡೆತದಿಂದ ರೈತರು ಕಂಗಾಲಾಗಿದ್ದಾರೆ. ನಷ್ಟ ಅನುಭವಿಸಿದ ರೈತರು ಆತ್ಮಹತ್ಯೆ ದಾರಿಹಿಡಿದಿದ್ದಾರೆ. ಇದಕ್ಕೆಲ್ಲ ಪರಿಹಾರ ಹುಡುಕಬೇಕಿರುವ ಸರ್ಕಾರ ಏನು ಮಾಡುತ್ತಿದೆ? ಎಂದು ಕಿಡಿ ಕಾರಿದ ಶಾಸಕರು ನಾಳೆ ಜಿಲ್ಲೆಗೆ ಬರುವ ಮೋದಿ ಏನು ಪರಿಹಾರ ಘೋಷಣೆ ಮಾಡಲಿದ್ದಾರೆ ಎನ್ನುವ ಕುತೂಹಲ ನಮಗಿದೆ. ನೆಟೆರೋಗದ ಪರಿಹಾರ ನೀಡದಿದ್ದರೆ ಬೀದಿಗಿಳಿದು ಹೋರಾಟ ನಡೆಸಲಿದ್ದೇವೆ ಎಂದು ಘೋಷಿಸಿದರು.
ಕಾಂಗ್ರೆಸ್ ಪಕ್ಷ ಈ ಹಿಂದಿನ 162 ಭರವಸೆಗಳಲ್ಲಿ 158 ಭರವಸೆಗಳನ್ನು ಈಡೇರಿಸಿದ್ದೇವೆ. ಈ ಸಲ ಎರಡು ಭರವಸೆಗಳನ್ನು ಈಗ ಕೊಟ್ಟಿದ್ದೇವೆ. ಗೃಹಜ್ಯೋತಿ ಯೋಜನೆಯಡಿಯಲ್ಲಿ ಪ್ರತಿ ಮನೆಗೆ 200 ಯೂನಿಟ್ ಉಚಿತ ವಿದ್ಯುತ್ ನೀಡಲಾಗುವುದು ಹಾಗೂ ಗೃಹ ಲಕ್ಷ್ಮೀ ಯೋಜನೆಯಡಿಯಲ್ಲಿ ಪ್ರತಿಮನೆಯ ಯಜಮಾನಿಗೆ ಪ್ರತಿತಿಂಗಳು 2000 ರೂ ನೀಡುತ್ತೇವೆ ಇದು ನಮ್ಮ ಪಕ್ಷದ ಗ್ಯಾರಂಟಿ ಎಂದು ಭರವಸೆ ನೀಡಿ. ಮುಂಬರುವ ದಿನಗಳಲ್ಲಿ ಯುವಕರಿಗೆ ಹಾಗೂ ರೈತರಿಗೆ ಕಾರ್ಯಕ್ರಮ ರೂಪಿಸಲಿದ್ದೇವೆ ಎಂದರು.
ಮಾಜಿ ಜಿಪಂ ಅದ್ಯಕ್ಷ ಹಾಗೂ ಚುನಾವಣೆ ಪ್ರಚಾರ ಸಮಿತಿಯ ಸಂಯೋಜಕರಾದ ರಮೇಶ ಮರಗೋಳ ಮಾತನಾಡಿ ಗ್ರಾಮದಲ್ಲಿ ರೂ 76 ಲಕ್ಷ ವೆಚ್ಚದ ಶಾಲೆಯ ಕೋಣೆ ನಿರ್ಮಾಣ ಮಾಡಲಾಗಿದೆ.
ಬಿಜೆಪಿ ಪಕ್ಷದಲ್ಲಿ ಹಿರಿಯರಿಲ್ಲ ಕೇವಲ ಕಿರಿಯರೇ ತುಂಬಿ ಹೋಗಿದ್ದು ಚಿತ್ತಾಪುರ ಕ್ಷೇತ್ರದಲ್ಲಿ ಕೆಳ ಮಟ್ಟದ ರಾಜಕೀಯ ನಡೆಯುತ್ತಿದೆ. ಇಲ್ಲಿನ ಜನರ ಕಷ್ಟ ಸುಖ ತಿಳಿಯಬೇಕಾದರೆ ಸ್ಥಳೀಯ ನಾಯಕರಿಗೆ ಮಣೆ ಹಾಕಬೇಕು. ಆದರೆ ದೂರದ ಊರಿನಿಂದ ಬಂದವರು ನಾಯಕರಂತೆ ಬಿಂಬಿಸಿಕೊAಡು ಓಡಾಡುತ್ತಿದ್ದಾರೆ ಎಂದು ಟೀಕಿಸಿದರು.
ಕ್ಷೇತ್ರದ ಬಗ್ಗೆ ಚಿಂತನೆಯುಳ್ಳ ನಾಯಕರು ಶಾಸಕರಾಗಬೇಕು. ಪ್ರಿಯಾಂಕ್ ಖರ್ಗೆ ಅವರಿಗೆ ಜನರ ಪರ ಕಾಳಜಿ ಇದೆ ಅಭಿವೃದ್ದಿ ಮಾಡುವ ತುಡಿತವಿದೆ. ಅಂತಹ ಅರ್ಹತೆ ಇರುವ ನಾಯಕ ಬಿಜೆಪಿಯಲ್ಲಿಲ್ಲ ಇದನ್ನು ಜನರು ಮನಗಾಣಬೇಕು. ಹಣ ಯಾರೂ ಕೊಟ್ಟರೂ ತೆಗೆದುಕೊಳ್ಳಬೇಡಿ ಶಾಸಕರಿಂದ ಕೆಲಸ ತೆಗೆದುಕೊಳ್ಳಬೇಕು ಎಂದು ಕರೆ ನೀಡಿದರು.
ಕಂಬಳೇಶ್ವರ ಮಠದ ಪೀಠಾಧಿಪತಿಗಳಾದ ಸೋಮಶೇಖರ ಶಿವಾಚಾರ್ಯರು, ಗ್ರಾಮ ಪಂಚಾಯತ ಅಧ್ಯಕ್ಷರಾದ ಸರೋಜಿನಿ ದೇಶಮುಖ, ಭೀಮಣ್ಣ ಸಾಲಿ, ರಮೇಶ ಮರಗೋಳ,ಮಹೇಬೂಬ್ ಸಾಹೇಬ್ ಸೇರಿದಂತೆ ಮತ್ತಿತರಿದ್ದರು.
Home Featured Kalaburagi ಚಿತ್ತಾಪುರ ಕ್ಷೇತ್ರಕ್ಕೆ ಮಲತಾಯಿ ಧೋರಣೆ- ಶಾಸಕರ ಕಿಡಿಕ್ಷೇತ್ರಕ್ಕೆ ಬಂದ 200 ಕೋಟಿ ರೂ. ಅನುದಾನ ವಾಪಸ್