ಕಲಬುರಗಿ,ಜ.7:ಸ್ವಾತಂತ್ರ‍್ಯದ ಶತಮಾನೋತ್ಸವದ ಸಂದರ್ಭದಲ್ಲಿ 2050 ವೇಳೆಗೆ ಕಲಬುರಗಿ ಜಿಲ್ಲೆಯ ಸಮಗ್ರ ಅಭಿವೃದ್ಧಿ ದೃಷ್ಠಿಕೋನದ ವಿಜನ್-2050 ಡಾಕ್ಯೂಮೆಂಟ್ ಸಿದ್ಧಪಡಿಸಲು ಜಿಲ್ಲೆಯ ಜನಪ್ರತಿನಿಧಿಗಳು ಸಹಕಾರ ನೀಡಬೇಕೆಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಡಾ.ಮುರುಗೇಶ ನಿರಾಣಿ ಹೇಳಿದರು.
ಶನಿವಾರ ಇಲಿನ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ(ಕೆ.ಡಿ.ಪಿ.) ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ತೋಟಗಾರಿಕೆ ಇಲಾಖೆಯ ಚರ್ಚೆ ವೇಳೆಯಲ್ಲಿ ಮಾತನಾಡಿದ ಅವರು, ಕೃಷಿ, ತೋಗಾರಿಕೆ, ಶಿಕ್ಷಣ, ನೀರಾವರಿ, ಸಾರಿಗೆ, ಮೂಲಸೌಕರ್ಯ, ತಂತ್ರಜ್ಞಾನ, ಕೈಗಾರಿಕೆ ಹೀಗೆ ಪ್ರತಿಯೊಂದು ಕ್ಷೇತದ ಸಮಗ್ರ ಅಭಿವೃದ್ಧಿಗೆ ನೀಲಿ ನಕ್ಷೆ ತಯ್ಯಾರಿಸುವುದು ತುಂಬಾ ಮುಖ್ಯವಾಗಿದೆ. ಇದರ ಡಿ.ಪಿ.ಆರ್. ತಯ್ಯಾರಿಕೆಗೆ ಕೆ.ಕೆ.ಆರ್.ಡಿ.ಬಿ. ಮಂಡಳಿಯಲ್ಲಿ 10 ಕೋಟಿ ರೂ. ಮೀಸಲಿಟ್ಟಿದೆ ಎಂದರು.
ತೋಟಗಾರಿಕೆ ಉಪನಿರ್ದೇಶಕ ಸಂತೋಷ್ ಇನಾಂದಾರ ಮಾತನಾಡಿ, ಇಸ್ರಾಯಿಲ್ ಮಾದರಿ ಕೃಷಿ ಅಳವಡಿಕೆಗೆ ಇಸ್ರಾಯಿಲ್ ಕಾನ್ಸುಲೇಟ್ ಜನರಲ್ ಅವರೊಂದಿಗೆ ಡಿ.ಸಿ. ಯಶವಂತ ವಿ. ಗುರುಕರ್ ಈಗಾಗಲೆ ಒಂದು ಸುತ್ತಿನ ಮಾತುಕತೆ ನಡೆಸಿದ್ದು, ಅದರ ಫಲವಾಗಿ ಕಲಬುರಗಿ ಜಿಲ್ಲೆಯಲ್ಲಿ ಸುಮಾರು 500 ಎಕರೆ ಪ್ರದೇಶದಲ್ಲಿ ತಂತ್ರಜ್ಞಾನ ಆಧಾರಿಕ ಕೃಷಿ ಪ್ರಾಯೋಗಿಕವಾಗಿ ಜಾರಿಗೆ ತರಲು ಪಾಳಾ, ಮುಗುಳನಾಗಾಂವ ಕೆರೆ ಗುರುತಿಸಿದೆ ಎಂದ ಅವರು, ಮುಂದಿನ 3 ವರ್ಷದಲ್ಲಿ ಈ ಕರೆ ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿ ತೆಗೆದುಕೊಳ್ಳಬಹುದಾದ ಕ್ರಮಗಳ ಕುರಿತು ಕರಡು ಕ್ರಿಯಾ ಯೋಜನೆಯ ವರದಿಯನ್ನು ಸಚಿವರಿಗೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಕೆ.ಕೆ.ಆರ್.ಡಿ.ಬಿ. ಅಧ್ಯಕ್ಷರು ಹಾಗೂ ಕಲಬುರಗಿ ದಕ್ಷಿಣ ಶಾಸಕ ದತ್ತಾತ್ರೇಯ ಪಾಟೀಲ ರೇವೂರ ಮತ್ತು ಆಳಂದ ಶಾಸಕ ಸುಭಾಷ ಗುತ್ತೇದಾರ ಅವರು ಮಾತನಾಡಿ, ಪ್ರತಿ ವಿದಾನಸಭಾ ಕ್ಷೇತ್ರದಿಂದ ಒಂದು ಕೆರೆಯನ್ನು ಪ್ರಾಯೋಗಿಕವಾಗಿ ತೆಗೆದುಕೊಳ್ಳಬೇಕೆಂದರು. ಇದಕ್ಕೆ ಉಳಿದ ಶಾಸಕರ ಧ್ವನಿಗೂಡಿಸಿದರು.
ಎಸ್.ಎಸ್.ಎಲ್.ಸಿ. ಫಲಿತಾಂಶ ಸುಧಾರಿಸಿ:
ಶಾಲಾ ಶಿಕ್ಷಣ ಪ್ರಗತಿ ಪರಿಶೀಲನೆ ಸಂದರ್ಭದಲ್ಲಿ ಡಿ.ಡಿ.ಪಿ.ಐ. ಸಕ್ರೆಪ್ಪಗೌಡ ಬಿರಾದಾರ ಮಾತನಾಡಿ, ಎಸ್.ಎಸ್.ಎಲ್.ಸಿ. ಫಲಿತಾಂಶ ಸುಧಾರಣೆಗೆ ವಿದ್ಯಾರ್ಥಿಗಳ ಶ್ರೇಣಿಕರಣ, ಬಾಗಿಲು ಮುಚ್ಚದ ಶಾಲೆ, ಶಾಲಾ ದತ್ತು, ವಿದ್ಯಾರ್ಥಿ ಗುಂಪು ರಚಿಸಿ ಅದರ ಮೇಲೆ ಶಿಕ್ಷಕರ ನಿಗಾ, ಗೈರು ಹಾಜರಿಗೆ ಕಡಿವಾಣ, ಭಾಷಾ ಮತ್ತು ಕೋರ್ ವಿಷಯದ ಶಿಕ್ಷಕರ ಜ್ಞಾನ ಸಮಾಗಮಕ್ಕೆ ಅವಕಾಶ ಸೇರಿದಂತೆ ಒಟ್ಟು 15 ಅಂಶಗಳ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಸಭೆಗೆ ತಿಳಿಸಿದರು. ಸಚಿವ ಡಾ.ಮುರುಗೇಶ ನಿರಾಣಿ ಮಾತನಾಡಿ ಶಿಕ್ಷಣ ಕ್ಷೇತ್ರ ಸುಧಾರಣೆಗೆ ಹೆಚ್ಚಿನ ಒತ್ತು ಕೊಡಬೇಕು. ಹಾಸನ, ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಎಸ್.ಎಸ್.ಎಲ್.ಸಿ. ಸಾಧನೆ ಕುರಿತು ಅಧ್ಯಯನ ಮಾಡಬೇಕು. ಶಿಕ್ಷಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕಲಬುರಗಿ ಟಾಪ್ 10 ರಲ್ಲಿ ತರಬೇಕು ಎಂದು ಸೂಚಿಸಿದರು.
ಎಸ್.ಎಸ್.ಎಲ್.ಸಿ. ಫಲಿತಾಂಶ ಸುಧಾರಣೆ ನಿಟ್ಟಿನಲ್ಲಿ ವಿಧಾನ ಪರಿಷತ್ ಸಾಸಕ ಶಶೀಲ ಜಿ. ನಮೋಶಿ ಮಾತನಾಡಿ ಸೂಕ್ತ ಕ್ರಿಯಾ ಯೋಜನೆ ರೂಪಿಸಬೇಕು. ನಕಲು ಮಾಡುವ ಕೆಟ್ಟ ಪ್ರವೃತ್ತಿಗೆ ಕಡಿವಾಣ ಹಾಕಲೆಬೇಕು. ಶಿಕ್ಷಕರು ತಮ್ಮ ಸೇವಾ ವಿಷಯಗಳಿಗೆ ಅನಗತ್ಯ ಬಿ.ಇ.ಓ., ಡಿ.ಡಿ.ಪಿ.ಐ. ಕಚೇರಿ ಅಲೆದಾಡುತ್ತಾರೆ. ಇದನ್ನು ತಪ್ಪಿಸಬೇಕು ಎಂದು ಡಿ.ಡಿ.ಪಿ.ಐ ಅವರಿಗೆ ತಿಳಿಸಿದರು.
ಶಾಸಕ ಎಂ.ವೈ. ಪಾಟೀಲ ಮಾತನಾಡಿ ತಮ್ಮ ಕ್ಷೇತ್ರದಲ್ಲಿ 450 ಕೊಠಡಿಗಳು ಕೆಟ್ಟಿವೆ. ಇತ್ತೀಚೆಗೆ ಹಾವನೂರ ಶಾಲೆಯಲ್ಲಿ ಕೊಠಡಿ ಮೇಲ್ಛಾವಣಿ ಬಿದ್ದಿದ್ದೆ. ಅದೃಷ್ಟಾವಶಾತ್ ಮಕ್ಕಳಿಗೆ ಏನು ತೊಂದರೆಯಾಗಿಲ್ಲ. ಮೂಲಸೌಕರ್ಯಕ್ಕೆ ಹೆಚ್ಚಿನ ಒತ್ತು ನೀಡಬೇಕು ಎಂದರು. ಆಗ ಸಚಿವ ಮುರುಗೇಶ ನಿರಾಣಿ ಮಾತನಾಡಿ ನಮ್ಮ ಸರ್ಕಾರ ಐತಿಹಾಸಿಕವಾಗಿ ವಿವೇಕ ಯೋಜನೆಯಡಿ 8,000 ಶಾಲಾ ಕೊಠಡಿ ನಿರ್ಮಿಸುತ್ತಿದ್ದು, ಇದರಲ್ಲಿ 2,500 ಕೊಠಡಿ ಕಲ್ಯಾಣ ಕರ್ನಾಟಕದಲ್ಲಿ ಸ್ಥಾಪಿಸಲಾಗುತ್ತಿದೆ ಎಂದರು.
ಶಾಲೆ ಅನುಮತಿಗೆ ದುಡ್ಡು, ಶಾಸಕ ತೇಲ್ಕೂರ ಗರಂ:
ಹಳ್ಳಿಯಲ್ಲಿ ಶಾಲೆ ನಡೆಸುವುದೇ ತುಂಬಾ ಕಷ್ಟಕರವಾಗಿದೆ. ಇಂತಹ ಸಂದರ್ಭದಲ್ಲಿ ಸೇಡಂ ಮತ್ತು ಚಿಮಚೋಳಿ ತಾಲೂಕಿನಲ್ಲಿ ಶಾಲಾ ನವೀಕರಣ/ ಅನುಮತಿಗೆ ಶಿಕ್ಷಣ ಇಲಾಖೆಯವರು ಮತ್ತು ಮಕ್ಕಳ ಭದ್ರತೆ ದೃಷ್ಠಿಯಿಂದ ಪರವಾನಿಗೆ ನೀಡಲು ಅಗ್ನಿಶಾಮಕ ಇಲಾಖೆಯವರು ಹಣ ಕೇಳುತ್ತಿದ್ದಾರೆ ಎಂದು ಅಧಿಕಾರಿಗಳ ಮೇಲೆ ಅಸಮಾಧಾನ ವ್ಯಕ್ತಪಡಿಸಿದ ಕೆ.ಕೆ.ಆರ್.ಟಿ.ಸಿ. ಮತ್ತು ಕಲಬುರಗಿ-ಯಾದಗಿರಿ ಡಿ.ಸಿ.ಸಿ. ಬ್ಯಾಂಕಿನ ಅಧ್ಯಕ್ಷರು ಹಾಗೂ ಸೇಡಂ ಶಾಸಕ ರಾಜಕುಮಾರ ಪಾಟೀಲ ತೇಲ್ಕೂರ ಅವರು, ದುಡ್ಡು ಕೇಳಿದ ಸಿಬ್ಬಂದಿಗಳ ಮೇಲೆ ಕ್ರಮ ಕೈಗೊಳ್ಳಬೇಕು. ಇನ್ನು ಶಾಸಕರು, ಸಚಿವರು ಮತ್ತು ಸರ್ಕಾರದ ಕುರಿತು ಯಾವುದೇ ಅಧಿಕಾರಿ-ಸಿಬ್ಬಂದಿ ಹಗುರವಾಗಿ ಮಾತನಾಡಬಾರದು ಎಂದು ಎಚ್ಚರಿಕೆ ನೀಡಿದರು. ಇದಕ್ಕೆ ಕೆ.ಕೆ.ಆರ್.ಡಿ.ಬಿ. ಅಧ್ಯಕ್ಷ ದತ್ತಾತ್ರೇಯ ಪಾಟೀಲ ರೇವೂರ, ಎಂ.ಎಲ್.ಸಿ. ಶಶೀಲ ಜಿ. ನಮೋಶಿ ಸಹ ಧ್ವನಿಗೂಡಿಸಿ ಜನಪ್ರತಿನಿಧಿಗಳ ಬಗ್ಗೆ ಹಗುರವಾಗಿ ಮಾತನಾಡುವುದನ್ನು ಸಹಿಸುವುದಿಲ್ಲ ಎಂದರು.
ಆರೋಗ್ಯ ಇಲಾಖೆ ಚರ್ಚೆ ಸಂದರ್ಭದಲ್ಲಿ ಡಿ.ಎಚ್.ಓ. ಡಾ.ರಾಜಶೇಖರ ಮಾಲಿಪಾಟೀಲ ಮಾತನಾಡಿ, ವಿದೇಶದಲ್ಲಿ ಕೋವಿಡ್ ಸಂಖ್ಯೆ ಹೆಚ್ಚಳ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದ ಮಾರ್ಗಸೂಚಿಯಂತೆ ಕೋವಿಡ್ ನಿಯಂತ್ರಣಕ್ಕೆ ಎಲ್ಲಾ ಸಿದ್ಧತೆ ಮಡಿಕೊಳ್ಳಲಾಗಿದೆ. 850 ಐಸೋಲೇಷನ್ ಬೆ???ಗಳಿದ್ದು, ಇದರಲ್ಲಿ 640ಕ್ಕೆ ಆಕ್ಸಿಜನ್ ವ್ಯವಸ್ಥೆ ಇದೆ. ಯಾವುದೇ ಔಷಧಿ ಕೊರತೆಯಿಲ್ಲ ಎಂದು ಸಭೆಗೆ ತಿಳಿಸಿದರು.
ಜಿಲ್ಲಾ ಪಂಚಾಯತ್ ಸಿ.ಇ.ಓ ಡಾ.ಗಿರೀಶ್ ಡಿ. ಬದೋಲೆ ಅವರು ಎಸ್.ಎಸ್.ಎಲ್.ಸಿ. ಫಲಿತಾಂಶ ಸುಧಾರಣೆಗೆ ಕೈಗೊಂಡಿರುವ ಯೋಜನೆಗಳು ಕುರಿತು ಮಾಹಿತಿ ನೀಡಿದರು.
ಸಭೆಯಲಿ ನಿಜಶರಣ ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಬಾಬುರಾವ ಚಿಂಚನಸೂರು, ಚಿಂಚೋಳಿ ಶಾಸಕ ಅವಿನಾಶ ಜಾಧವ, ವಿಧಾನ ಪರಿಷತ್ ಶಾಸಕ ಚಂದ್ರಶೇಖರ ಪಾಟೀಲ ಹುಮನಾಬಾದ, ಕಲಬುರಗಿ ಕಾಡಾ ಅಧ್ಯಕ್ಷ ಹರ್ಷವರ್ಧನ ಗುಗಳೆ, ಎಸ್.ಪಿ. ಇಶಾ ಪಂತ್, ಡಿ.ಸಿ.ಪಿ. ಅಡ್ಡೂರು ಶ್ರೀನಿವಾಸಲು, ಮಹಾನಗರ ಪಾಲಿಕೆ ಆಯುಕ್ತ ಭುವನೇಶ ಪಾಟೀಲ ದೇವಿದಾಸ್ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಇದ್ದರು.