ಫಲಿಸದ ಕೋಟ್ಯಾಂತರ ಭಕ್ತರ ಪ್ರಾರ್ಥನೆ,
ನಡೆದಾಡುವ ಸಂತ ಸಿದ್ದೇಶ್ವರ ಸ್ವಾಮೀಜಿ ಲಿಂಗೈಕ್ಯ

0
574

ವಿಜಯಪುರ, ಜ. 02: ಕಳೆದ ಕೆಲ ದಿನಗಳಿಂದ ಅನಾರೋಗ್ಯಕ್ಕೆ ತುತ್ತಾಗಿ ಮಠದಲ್ಲೇ ಚಿಕಿತ್ಸೆ ಪಡೆಯುತ್ತಿದ್ದ ಜ್ಞಾನಯೋಗಾಶ್ರಮದ ಸಿದ್ದೇಶ್ವರ ಶ್ರೀಗಳು ಸೋಮವಾರ ಕೊನೆಯುಸಿರೆಳೆದಿದ್ದಾರೆ.
ಉತ್ತರ ಕರ್ನಾಟಕ ಭಾಗದಲ್ಲಿ ನಡೆದಾಡುವ ದೇವರೆಂದೇ ಖ್ಯಾತಿ ಪಡೆದಿದ್ದ ಸ್ವಾಮೀಜಿಗಳು, ಪ್ರವಚನಕಾರರಾಗಿಯೂ ಖ್ಯಾತಿ ಪಡೆದಿದ್ದರು. ಕಳೆದ ಎರಡು ದಿನಗಳಿಂದ ಶ್ರೀಗಳು ಯಾವುದೇ ಆಹಾರ ಸೇವನೆ ಮಾಡಿರಲಿಲ್ಲವಂತೆ ಶ್ರೀಗಳ ಆರೋಗ್ಯ ಕುರಿತಂತೆ ಆತಂಕಗೊAಡಿದ್ದ ಮಠದ ಭಕ್ತರು ಸಾವಿರಾರರು ಸಂಖ್ಯೆಯಲ್ಲಿ ಜ್ಞಾನಯೋಗಾಶ್ರಮಕ್ಕೆ ಭೇಟಿ ನೀಡಿ ಸಿದ್ದೇಶ್ವರ ಶ್ರೀಗಳ ದರ್ಶನಕ್ಕಾಗಿ ಪಟ್ಟು ಹಿಡಿದ್ದರು. ಭಕ್ತಿಗೆ ಜಿಲ್ಲಾಡಳಿತ ಎಲ್‌ಇಡಿ ಸ್ಕ್ರೀನ್ ಅಳವಡಿಸುವ ಮೂಲಕ ಶ್ರೀಗಳ ದರ್ಶನ ಪಡೆದುಕೊಳ್ಳಲು ಅವಕಾಶ ನೀಡಿತ್ತು.
ಗಣ್ಯರಿಂದ ಸಿದ್ದೇಶ್ವರ ಸ್ವಾಮೀಜಿಗಳ ದರ್ಶನ
ಸಿಎಂ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಸಚಿವ ಗೋವಿಂದ ಕಾರಜೋಳ ಸೇರಿದಂತೆ ಹಲವು ಗಣ್ಯರು ಶ್ರೀಗಳ ದರ್ಶನ ಪಡೆದುಕೊಂಡು ಆರೋಗ್ಯ ವಿಚಾರಿಸಿದ್ದರು. ಅಲ್ಲದೇ ಪ್ರಧಾನಿ ಮೋದಿ ಅವರು ಕೂಡ ಕರೆ ಮಾಡಿ, ಶ್ರೀಗಳ ಆರೋಗ್ಯದ ಬಗ್ಗೆ ಮಾಹಿತಿ ಪಡೆದುಕೊಂಡಿದ್ದರು. ಅಲ್ಲದೇ, ಬೇಗ ಗುಣಮುಖರಾಗುವಂತೆ ಪ್ರಾರ್ಥಿಸಿದ್ದರು. ಇನ್ನು, ಮೈಸೂರಿನ ದೇಶಿಕೇಂದ್ರ ಸುತ್ತೂರು ಶ್ರೀಗಳು, ಅದಿಚುಂಚನಗಿರಿ ನಿರ್ಮಲಾನಂದ ಶ್ರೀಗಳು, ಚಿತ್ತರಗಿ ಮಠದ ಗುರುಮಹಾಂತ ಶ್ರೀಗಳು ಸೇರಿದಂತೆ ಹಲವು ಶಾಸಕರು, ಮಾಜಿ ಸಚಿವರು ಕೂಡ ಶ್ರೀಗಳ ದರ್ಶನ ಪಡೆದುಕೊಂಡಿದ್ದರು.
ಸಿದ್ದೇಶ್ವರ ಶ್ರೀಗಳು ಅತ್ಯುತ್ತಮ ಆಧ್ಯಾತ್ಮಿಕ ಚಿಂತಕರು, ಭಾಷಣಕಾರರಾಗಿದ್ದರು. ಶ್ರೀಗಳನ್ನು ನಡೆದಾಡುವ ದೇವರು ಎಂದೇ ಭಕ್ತರು ಭಾವಿಸಿದ್ದರು. 1941ರಲ್ಲಿ ವಿಜಯಪುರ ಜಿಲ್ಲೆಯಲ್ಲಿ ಬಿಜ್ಜಗರಿಯಲ್ಲಿ ರೈತ ಕುಟುಂಬದಲ್ಲಿ ಸಿದ್ದೇಶ್ವರ ಸ್ವಾಮೀಜಿಗಳು ಜನಿಸಿದ್ದರು. ಅವರ ಬಾಲ್ಯದ ಹೆಸರು ಶಿದಗೊಂಡ ಓಗಪ್ಪ ಬಿರಾದಾರ. 1946 ರಲ್ಲಿ 1ನೇ ತರಗತಿ ಪ್ರವೇಶ ಪಡೆದಿದ್ದ ಶ್ರೀಗಳು, 1954ರಲ್ಲಿ ಏಳನೇ ತರಗತಿ ಮುಗಿಸಿದ್ದರು.
ತಮ್ಮ 19ನೇ ವಯಸ್ಸಿನಲ್ಲೇ ತಮ್ಮ ಗುರುಗಳಾದ ಶ್ರೀ ಮಲ್ಲಿಕಾರ್ಜುನ ಸ್ವಾಮಿಗಳು ಮಾಡಿದ ಪ್ರವಚನಗಳನ್ನು ಒಂದುಗೂಡಿಸಿ, ಅವರ ಮಾರ್ಗದರ್ಶನದಲ್ಲಿ ‘ತತ್ವ ಶಿರೋಮಣಿ’ ಎಂಬ ಪುಸ್ತಕವನ್ನು ಪ್ರಕಟಿಸಿದ್ದರು. ಆ ಮೂಲಕ ಚಿಕ್ಕ ವಯಸ್ಸಿಯಲ್ಲೇ ತಮ್ಮ ಆಧ್ಯಾತ್ಮಿಕತೆಯ ಪ್ರಯಾಣವನ್ನು ಆರಂಭಿಸಿದ್ದರು.
ಹುಟ್ಟೂರುನಿAದ ಗದಗ ಜಿಲ್ಲೆಯ ನಾಗನೂರಿಗೆ ತೆರಳಿದ್ದ ಅವರು ಸದಾಶಿವ ಸ್ವಾಮೀಜಿಯವರ ಮಾರ್ಗದರ್ಶನದಲ್ಲಿ ಸಂಸ್ಕೃತ ಭಾಷೆಯಲ್ಲಿ ಪಾಂಡಿತ್ಯ ಸಾಧಿಸಿದ್ದರು. ಇದೇ ವೇಳೆ ವೇದಾಂಗ, ಯೋಗ, ಶರಣ ತತ್ವಶಾಸ್ತ್ರದಲ್ಲಿ ಅಭ್ಯಾಸವನ್ನು ಮಾಡಿದ್ದರು. ಆ ಬಳಿಕ ಪ್ರಚನಗಳನ್ನು ನೀಡಲು ಆರಂಭಿಸಿದ್ದರು.
ಕಠಿಣ ವಿಚಾರಗಳನ್ನು ಸಹಳವಾಗಿ, ಸಂವೇದನಾಶೀಲವಾಗಿ ಹಾಗೂ ಆನಂದದಾಯಕವಾಗಿ ಪ್ರವಚನಗಳಲ್ಲಿ ತಿಳಿಸುತ್ತಿದ್ದರು. ಉತ್ತರ ಕರ್ನಾಟಕ ಮಾತ್ರವಲ್ಲದೇ, ಮಹಾರಾಷ್ಟ್ರ ಗೋವಾದಲ್ಲೂ ಹೆಚ್ಚು ಪ್ರಚಾರಗೊಂಡಿದ್ದವು. ಆಧ್ಯಾತ್ಮಿಕ ಚಟುವಟಿಕೆಗಳ ಜೊತೆಗೆ ಕಾಲೇಜು ಅಭ್ಯಾಸವನ್ನು ಮುಂದುವರಿಸಿದ್ದ ಶ್ರೀಗಳು, ತತ್ವಶಾಸ್ತ್ರದಲ್ಲಿ ಎಂಎ ಪದವಿಯನ್ನು ಕೊಲ್ಲಾಪುರ ವಿಶ್ವವಿದ್ಯಾಲಯದಿಂದ ಪಡೆದುಕೊಂಡಿದ್ದರು.
ಕನ್ನಡ, ಸಂಸ್ಕೃತ, ಇಂಗ್ಲಿಷ್, ಮರಾಠಿ ಮತ್ತು ಹಿಂದಿ ಭಾಷೆಗಳ ಮೇಲೆ ಶ್ರೀಗಳು ಪಟ್ಟು ಸಾಧಿಸಿದ್ದರು. ಅತ್ಯಂತ ಸರಳ ಜೀವನ ಮೂಲಕವೇ ಎಲ್ಲರಿಗೂ ಮಾದರಿಯಾಗಿನಿಂತ ಸಿದ್ದೇಶ್ವರರು, ತಮ್ಮ ಗುರುಗಳಾದ ಮಲ್ಲಿಕಾರ್ಜುನ ಸ್ವಾಮಿಗಳ ಸ್ವಾಮೀಜಿಗಳಿಂದ ಕಲಿತ ಜೀವನ ಮೌಲ್ಯಗಳನ್ನು ತಮ್ಮ ಉಪನ್ಯಾಸದ ಮೂಲಕ ಹೇಳುತ್ತಿದ್ದರು.
ಬದುಕುವುದು ಹೇಗೆ, ಬದುಕಿನ ದಾರಿ ಎಂಬ ಪ್ರವಚನಗಳು ಸಾಕಷ್ಟು ಜನರಿಗೆ ಜೀವನದ ಕುರಿತ ಮಾರ್ಗದರ್ಶವನ್ನು ನೀಡಿವೆ. ಮಲ್ಲಿಕಾರ್ಜುನ ಸ್ವಾಮಿಗಳ ಕಾಲದಲ್ಲಿ ಅತ್ಯಂತ ಪ್ರವರ್ಧಮಾನಕ್ಕೆ ಬಂದ ಯೋಗಾಶ್ರಮದ ಜವಾಬ್ದಾರಿ ವಹಿಸಿಕೊಂಡು ಬಂದು, ಗ್ರಾಮೀಣ ಭಾಗದ ಮಕ್ಕಳು ಶಿಕ್ಷಣಕ್ಕಾಗಿ ಪಡುತ್ತಿದ್ದ ಕಷ್ಟವನ್ನು ಗಮನಿಸಿ ಊಟ, ವಸತಿಗಳೊಂದಿಗೆ ಶಿಕ್ಷಣ ಕೇಂದ್ರಗಳನ್ನು ಆರಂಭಿಸಿದ್ದರು. ಇದರಿಂದ ಸಾವಿರಾರು ಮಕ್ಕಳು ಶಿಕ್ಷಣವನ್ನು ಪಡೆದುಕೊಂಡಿದ್ದಾರೆ.
ಇನ್ನು, ಅವರು ಸ್ಥಾಪಿಸಿದ್ದ, ಗುರುಗಳು ನಡೆಸಿಕೊಂಡು ಹೋಗುತ್ತಿದ್ದ ಶಿಕ್ಷಣ ಸಂಸ್ಥೆಗಳಿಗೆ ಅವರು ತಮ್ಮ ಅಥವಾ ಆಶ್ರಮ ಹೆಸರನ್ನು ಇಟ್ಟಿಲ್ಲ ಎಂಬುವುದು ಇಲ್ಲಿ ಗಮನಾರ್ಹವಾಗಿದೆ.
ಸ್ವಾಮೀಜಿಗಳ ಸೇವೆಯನ್ನು ಗುರುತಿಸಿದ ಕೇಂದ್ರ ಸರ್ಕಾರ ಅವರಿಗೆ ಪದ್ಮಶ್ರೀ ಪ್ರಶಸ್ತಿ ಹಾಗೂ ಕರ್ನಾಟಕ ವಿವಿ ಗೌರವ ಡಾಕ್ಟರೇಟ್ ನೀಡಲು ಮುಂದಾಗಿತ್ತು. ಆದರೆ ಇಂತಹ ಹಲವು ಪ್ರಶಸ್ತಿಗಳನ್ನು ಸ್ವಾಮೀಜಿಗಳು ನಿರಾಕರಿಸಿದ್ದರು. ಅಲ್ಲದೇ ಕರ್ನಾಟಕ ರಾಜ್ಯ ಸರ್ಕಾರ ಮಠಕ್ಕೆ ಘೋಷನೆ ಮಾಡಿದ್ದ 2 ಕೋಟಿ ರೂಪಾಯಿ ಅನುದಾನವನ್ನು ಪಡೆಯಲು ನಿರಾಕರಿಸಿದ್ದರು.
ಇನ್ನು, ಸಿದ್ದೇಶ್ವರ ಶ್ರೀಗಳ ಕುರಿತಂತೆ ಮಾತನಾಡಿರುವ ಶ್ರೀಗಳ ಬಾಲ್ಯ ಸ್ನೇಹಿತ ಹನಮಂತರಾಯಗೌಡ ಪಾಟೀಲ ಅವರು, ಪೂಜ್ಯರ ಬಾಲ್ಯದ ದಿನಗಳನ್ನು ಮೆಲುಕು ಹಾಕಿದ್ದಾರೆ. ಓದಿನಲ್ಲಿ ಆಧ್ಯಾತ್ಮದಲ್ಲಿ ಹೆಚ್ಚಿನ ಒಲುವು ಹೊಂದಿದ್ದನ್ನು ಸ್ಮರಿಸಿದರು. ಜ್ಞಾನಯೋಗಾಶ್ರಮದ ಜವಾಬ್ದಾರಿ ವಹಿಸಿಕೊಂಡ ನಂತರದಲ್ಲಿ 2001 ರಲ್ಲಿ ಹೈಸ್ಕೂಲ್ ಉದ್ಘಾಟನೆ ವೇಳೆ ಬಂದಿದ್ದೇವು. ಶ್ರೀಗಳನ್ನು ಊರಲ್ಲಿ ಮೆರವಣಿಗೆ ಮಾಡಿದ್ದು ನೆನಪಿಸಿಕೊಂಡರು. ಸಿದ್ದೇಶ್ವರ ಶ್ರೀಗಳಂತ ಮಹಾತ್ಮರು ನಡೆದಾಡಿದ ಈ ಶಾಲೆ ಎನ್ನುವುದೇ ನಮಗೆಲ್ಲ ಹೆಮ್ಮೆ ಎಂದು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here