ಕಲಬುರ್ಗಿ, ಸೆ.8- ಜಿಲ್ಲೆಯ ಹಲವೆಡೆ ಕಳೆದೆರಡು ದಿನಗಳಿಂದ ಮಳೆ ಅಬ್ಬರಿಸುತ್ತಿದೆ. ಹಳ್ಳಕೊಳ್ಳಗಳು ತುಂಬಿ ಹರಿಯುತ್ತಿವೆ. ಪರಿಣಾಮ ಹಲವೆಡೆ ಸಂಪರ್ಕ ಕಡಿತಗೊಂಡಿವೆ. ಗ್ರಾಮಸ್ಥರು ತುಂಬಿ ಹರಿಯುವ ನೀರಿನಲ್ಲಿಯೇ ದಾಟುವ ಹರಸಾಹಸ ಮಾಡುತ್ತಿದ್ದಾರೆ. ಮತ್ತೊಂದೆಡೆ ಸೇತುವೆ ಕಿತ್ತುಹೋದ ಪರಿಣಾಮ ಹೊಲಗಳಿಗೆ ಹೋಗಲೂ ರೈತರು ಪಡಬಾರದ ಕಷ್ಟ ಪಡುತ್ತಿದ್ದಾರೆ.
ಹೌದು ವರುಣನ ಅಬ್ಬರದಿಂದ ಬಿಸಿಲೂರಿನಲ್ಲಿ ಹಲವು ಗ್ರಾಮಸ್ಥರ ಜೀವನ ಅಕ್ಷರಶ: ದುಸ್ತರವಾಗಿದೆ. ಧಾರಾಕಾರ ಮಳೆಯಿಂದ ಅಫಜಲಪುರ ತಾಲ್ಲೂಕಿನ ರೇವೂರ್ (ಬಿ) ಗ್ರಾಮದ ಹಳ್ಳದ ನೀರು ಸೇತುವೆ ಮೇಲೆ ತುಂಬಿ ರಭಸವಾಗಿ ಹರಿಯುತ್ತಿದೆ. ರೇವೂರ್(ಬಿ) -ಸಿದನೂರ್ ಗ್ರಾಮದ ನಡುವಿನ ಸಂಪರ್ಕ ಸಂಪೂರ್ಣ ಕಡಿತವಾಗಿದೆ. ತುಂಬಿ ರಭಸವಾಗಿ ಹರಿಯುತ್ತಿರುವ ಹಳ್ಳದಲ್ಲಿಯೇ ನಡೆದುಕೊಂಡು ಸೇತುವೆ ದಾಟುವ ಗ್ರಾಮಸ್ಥರು ಹರಸಾಹಸಪಡುತ್ತಿದ್ದಾರೆ. ಕೊಂಚ ಯಾಮಾರಿದರೂ ನೀರಿನಲ್ಲಿ ಕೊಚ್ಚಿಕೊಂಡು ಹೋಗುವ ಆತಂಕವೂ ಇದೆ.
ಇನ್ನು ತಾಲ್ಲೂಕಿನ ಭೀಮಳ್ಳಿ ಗ್ರಾಮದ ಸೇತುವೆ ಕೊಚ್ಚಿಕೊಂಡು ಹೋದ ಪರಿಣಾಮ ಸಂಪರ್ಕ ಕಡಿತಗೊಂಡಿದೆ. ಎರಡು ದಿನಗಳ ಸುರಿದ ಧಾರಾಕಾರ ಮಳೆಯಿಂದಾಗಿ ಭೀಮಳ್ಳಿ- ಕೆರೆ ಭೋಸಗಾ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಸೇತುವೆ ಸಂಪೂರ್ಣ ಕೊಚ್ಚಿಕೊಂಡು ಹೋಗಿದೆ. ಪರಿಣಾಮ ಸುಮಾರು ಹತ್ತು ಕಿಲೋ ಮೀಟರ್ ದೂರ ಸುತ್ತಾಕಿ ಗ್ರಾಮಸ್ಥರು ತೆರಳುತ್ತಿದ್ದಾರೆ. ಎರಡು ಗ್ರಾಮಗಳ ಮಧ್ಯದಲ್ಲಿರುವ ಜಮೀನಿಗೆ ಹೋಗಲು ರೈತರು ಪಡಬಾರದ ಕಷ್ಟ ಪಡುತ್ತಿದ್ದಾರೆ. ಜೀವ ಕೈಯಲ್ಲಿ ಹಿಡಿದು ಕಿತ್ತು ಹೋದ ಸೇತುವೆಯಲ್ಲಿ ದಾಟುತ್ತಿದ್ದಾರೆ. ಹಳೆ ಸೇತುವೆ ಪಕ್ಕದಲ್ಲಿಯೇ ಹೊಸ ಸೇತುವೆ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ.
ಆದಾಗ್ಯೂ, ಮಳೆಯ ಕಾರಣದಿಂದಾಗಿ ಕಾಮಗಾರಿಗೆ ತೊಡ ಕುಂಟಾಗುತ್ತಿದೆ. ಮಳೆ ನಿಂತ ಮೇಲೆ ಶೀಘ್ರವಾಗಿ ಸೇತುವೆ ನಿರ್ಮಾಣ ಕಾರ್ಯ ಮುಕ್ತಾಯಗೊಳಿಸುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.
Home Featured Kalaburagi ಕಲಬುರ್ಗಿಯಲ್ಲಿ ಮತ್ತೆ ಮಳೆಯ ಅಬ್ಬರ: ಹಲವು ಗ್ರಾಮಗಳ ಸಂಪರ್ಕ ಕಡಿತ, ಪ್ರವಾಹದ ನೀರಿನಲ್ಲಿ ಸೇತುವೆ ದಾಟುವ...