ಚಿತ್ರದರ್ಗು, ಸೆ. 01: ಅಪ್ರಾಪ್ತ ಬಾಲಕಿಯರಿಗೆ ಲೈಂಗಿಕ ದೌರ್ಜನ್ಯದ ಆರೋಪ ಎದುರಿಸುತ್ತಿರುವ ಚಿತ್ರದುರ್ಗದ ಮುರುಘಾ ಮಠದ ಡಾ. ಶಿವಮೂರ್ತಿ ಮರುಘಾ ಶರಣರನ್ನು ಚಿತ್ರದುರ್ಗ ಪೊಲೀಸರು ಬಂಧಿಸಿದ್ದಾರೆ.
ಇoದು ಸಂಜೆಯಿAದಲೇ ಮಠದಲ್ಲಿ ಸ್ವಾಮೀಜಿಯ ವಿಚಾರಣೆಗಳನ್ನು ನಡೆಸಿದ್ದ ಚಿತ್ರದುರ್ಗ ಗ್ರಾಮೀಣ ಠಾಣೆಯ ಪೊಲೀಸರು, ರಾತ್ರಿ 10ರ ಸುಮಾರಿಗೆ ಮಠದಿಂದ ವಶಕ್ಕೆ ಪಡೆದುಕೊಂಡಿದ್ದರು.
ಫೋಕ್ಸೋ ಪ್ರಕರಣ ದಾಖಲಾಗಿ ಆರು ದಿನಗಳ ಬಳಿಕ ಪೊಲೀಸರು ಮುರುಘಾ ಶರಣರನ್ನು ವಶಕ್ಕೆ ಪಡೆದಿದ್ದಾರೆ. ಆಗಸ್ಟ್ 26ರಂದು ಮೈಸೂರಿನ ನಜರಾಬಾದ್ ಠಾಣೆಯಲ್ಲಿ ಪೋಕ್ಸೋ ಪ್ರಕರಣ ದಾಖಲಾಗಿತ್ತು.
ಮಠದಲ್ಲೇ ಮುರುಘಾ ಸ್ವಾಮೀಜಿ ವಿಚಾರಣೆ ನಡೆಸಿದ ಪೊಲೀಸರು ಬಳಿಕ ವಶಕ್ಕೆ ಪಡೆದಿದ್ದಾರೆ. ವಿಚಾರಣೆಯ ಭಾಗವಾಗಿ ವೈದ್ಯಕೀಯ ಪರೀಕ್ಷೆ ನಡೆಸಲು ಚಿತ್ರದುರ್ಗ ಜಿಲ್ಲಾಸ್ಪತ್ರೆಗೆ ಕರೆದೊಯ್ದಿದ್ದರು ಎನ್ನಲಾಗಿತ್ತು.
ಈ ಬೆಳವಣಿಗೆಯ ಮಧ್ಯೆ ಚಿತ್ರದುರ್ಗದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಮೈಸೂರು ‘ಒಡನಾಡಿ’ ಸಂಸ್ಥೆ ಪ್ರಕರಣವನ್ನು ಹೊರಗೆಳೆದ ಮೇಲೆ ಮೈಸೂರು ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯು ಆಗಸ್ಟ್ 26ರಂದು ನಗರದ ನಜರಾಬಾದ್ ಠಾಣೆಯಲ್ಲಿ ದೂರು ದಾಖಲಿಸಿತ್ತು. ನಂತರದ ಬೆಳವಣಿಗೆಯಲ್ಲಿ ಈ ಪ್ರಕರಣವು ಚಿತ್ರದುರ್ಗ ಪೊಲೀಸ್ ಠಾಣೆಗೆ ವರ್ಗಾವಣೆಯಾಗಿತ್ತು.
ಬಂಧನದ ಭೀತಿಯಲ್ಲಿದ್ದ ಮುರುಘಾ ಶರಣರು, ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ನಿರೀಕ್ಷಣಾ ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ್ದ ಕೋರ್ಟ್, ಶುಕ್ರವಾರಕ್ಕೆ ಮುಂದೂಡಿತ್ತು. ಈ ಎಲ್ಲ ಬೆಳವಣಿಗೆಗಳ ಮಧ್ಯೆ ಇಂದು ಸಂಜೆ ವೇಳೆಗೆ ಎಲ್ಲ ಆರೋಪಿಗಳ ವಿರುದ್ಧ ಲುಕೌಟ್ ನೋಟಿಸ್ ಜಾರಿಯಾಗಿತ್ತು. ಸ್ವಾಮೀಜಿ ವಿರುದ್ಧ ಪೋಕ್ಸೋ ಜೊತೆಗೆ ಪರಿಶಿಷ್ಟ ಜಾತಿ ಪಂಗಡ ದೌರ್ಜನ್ಯ ತಡೆ ಕಾಯ್ದೆ ಅಡಿಯೂ ಪ್ರಕರಣ ದಾಖಲಾಗಿತ್ತು.