ಪತ್ರಕರ್ತರ ರಾಜ್ಯ ಸಮ್ಮೇಳನ ನಿರ್ಣಯ ಜಾರಿಗೆ ಹೆಚ್ಚಿನ ಆದ್ಯತೆ: ತಗಡೂರು

0
694

ಕಲಬುರಗಿ: ಇದೇ ಜನೇವರಿ 3 ಮತ್ತು 4 ರಂದು ಕಲಬುರಗಿ ಯಲ್ಲಿ ನಡೆದ ಪತ್ರಕರ್ತರ 36ನೇ ರಾಜ್ಯ ಸಮ್ಮೇಳನದಲ್ಲಿ ತೆಗೆದುಕೊಂಡ ಮೂರು ನಿರ್ಣಯಗಳನ್ನು ಕಾರ್ಯರೂಪಕ್ಕೆ ಬರಲು ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ (ಕೆಯುಡಬ್ಲ್ಯೂಜೆ) ದ ಅಧ್ಯಕ್ಷ ಶಿವಾನಂದ ತಗಡೂರು ತಿಳಿಸಿದರು.
ಸಮ್ಮೇಳನದ ಯಶಸ್ವಿ ಹಿನ್ನೆಲೆಯಲ್ಲಿ ಕಲಬುರಗಿ ಪತ್ರಕರ್ತರು, ಜಿಲ್ಲಾಡಳಿತ ಹಾಗೂ ಸಹಕಾರ ನೀಡಿದ ಎಲ್ಲಾ ಜನಪ್ರತಿನಿಧಿಗಳಿಗೆ ಅಭಿನಂದನೆ ಸಲ್ಲಿಸಲು ಆಗಮಿಸಿದ ಅವರು ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಪತ್ರಕರ್ತರ ಕ್ಷೇಮ ನಿಧಿಗೆ 100ಕೋಟಿ ನಿಧಿ ಸ್ಥಾಪನೆ, ಕಲಬುರ್ಗಿಯಲ್ಲಿ ವಾರ್ತಾ ಇಲಾಖೆಯ ನಿರ್ದೇಶನಾಲಯ ಸ್ಥಾಪನೆ ಹಾಗೂ ಸ್ಥಳೀಯ ಮತ್ತು ರಾಜ್ಯ ಮಟ್ಟದ ಪತ್ರಿಕೆಗಳಿಗೆ ತಾರತಮ್ಯ ಇಲ್ಲದೆ ಜಾಹೀರಾತು ನೀಡಬೇಕು ಎಂಬ ನಿರ್ಣಯಗಳನ್ನು ಸಮ್ಮೇಳನದಲ್ಲಿ ಅಂಗೀಕರಿಸಲಾಗಿದ್ದು, ಅದನ್ನು ಜಾರಿಗೆ ತರಲು ಸರ್ಕಾರದ ಮೇಲೆ ಒತ್ತಡ ಹಾಕಲಾಗುವುದು ಎಂದು ಸ್ಪಷ್ಟಪಡಿಸಿದರು.
ಸಮ್ಮೇಳನದ ಸ್ಮರಣ ಸಂಚಿಕೆಯಲ್ಲಿ ಸಮ್ಮೇಳನದ ಸವಿನೆನಪುಗಳು, ಗೋಷ್ಠಿ ವಿವರ ಸೇರಿದಂತೆ ಹಲವು ವಿಷಯಗಳು ಒಳಗೊಂಡ ಸಂಚಿಕೆ ಪ್ರಕಟವಾಗಬೇಕಿರುವ ಹಿನ್ನೆಲೆಯಲ್ಲಿ ಮುಂದಿನ ಕೆಲವು ದಿನಗಳಲ್ಲೇ ಹೊರ ಬರಲಿದೆ ಎಂದು ತಿಳಿಸಿದರು.
ಕೊರೊನಾ ಸಮಯದಲ್ಲಿ ಅತ್ಯಂತ ಕಡಿಮೆ ಸಮಯದಲ್ಲಿ ಅದರಲ್ಲೂ ಎರಡ್ಮೂರು ಸಲ ಮುಂದೂಡಲ್ಪಟ್ಟು ಕಲಬುರಗಿ ಯಲ್ಲಿ ನಡೆದ ಪತ್ರಕರ್ತರ 36ನೇ ರಾಜ್ಯ ಸಮ್ಮೇಳನ ನಿರೀಕ್ಷೆ ಮೀರಿ ಯಶಸ್ವಿಯಾಗಿದೆ.‌ ಹಿಂದಿನ ಸಮ್ಮೇಳನದಲ್ಲಿ ಸಾವಿರ ಸಮೀಪ ಪತ್ರಕರ್ತ ಪ್ರತಿನಿಧಿಗಳು ಪಾಲ್ಗೊಂಡಿದ್ದರೆ, ಕಲಬುರಗಿ ಎರಡುವರೆ ಪಟ್ಟು ಹೆಚ್ಚು ಪತ್ರಕರ್ತರು ಪಾಲ್ಗೊಂಡಿದ್ದರು. ಒಟ್ಟಾರೆ ಸಮ್ಮೇಳನ ಹಲವು ಐತಿಹಾಸಿಕತೆಗೆ ಸಾಕ್ಷಿಯಾಯಿತು ಎಂದು ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು
ಬ್ರ್ಯಾಂಡ್ ಕಲಬುರ್ಗಿ ಕಾರ್ಯಕ್ರಮ ಹಾಗೂ ಅದರಲ್ಲಿ ಕಲಬುರಗಿ ಅಂದು, ಇಂದು, ಮುಂದೆ ಎಂಬ ವಿಷಯದ ಚರ್ಚೆ ಮಾದರಿಯಾಗಿ ನಡೆಯಿತು. ಇದನ್ನೆಲ್ಲ ದಾಖಲೀಕರಣಕ ತರಲು ಮುಂದಾಗಲಾಗಿದೆ ಎಂದು ಇದೇ ಸಂದರ್ಭದಲ್ಲಿ ತಿಳಿಸಿದರು.
ಸಮ್ಮೇಳನದಲ್ಲಿ ಎಲ್ಲ ಪ್ರಮುಖ ಪತ್ರಕರ್ತರಿಂದ ಹಿಡಿದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಡಾ. ಮಲ್ಲಿಕಾರ್ಜುನ ಖರ್ಗೆ, ಕೈಗಾರಿಕಾ ಸಚಿವ ಮುರುಗೇಶ ನಿರಾಣಿ ಸೇರಿದಂತೆ ಅನೇಕ ಗಣ್ಯರು ಪಾಲ್ಗೊಂಡು ಸಮ್ಮೇಳನ ಯಶಸ್ವಿ ಯಾಗಿದೆ. ಪ್ರಮುಖವಾಗಿ ವಿಚಾರ ಗೋಷ್ಠಿ ಗಳು ಅರ್ಥಪೂರ್ಣವಾಗಿ ನಡೆದಿವೆಯಲ್ಲದೇ ಸ್ಥಳಿಯ ಸಣ್ಣ ಪತ್ರಿಕೆಯಿಂದ ಹಿರಿಯ ಪತ್ರಕರ್ತರೆಲ್ಲರನ್ನು ಗುರುತಿಸಿ ಪ್ರಶಸ್ತಿ ಯೊಂದಿಗೆ ಸನ್ಮಾನಿಸಿ ಪುರಸ್ಕರಿಸಿರುವುದು ಹೆಮ್ಮೆ ತರುವಂತಾಗಿದೆ ಎಂದು ತಗಡೂರು ವಿವರಿಸಿದರು.
ಪತ್ರಕರ್ತರ ಸಂಘದ ಕಲಬುರಗಿ ಜಿಲ್ಲಾ ಘಟಕದ ಅಧ್ಯಕ್ಷ ಭವಾನಿಸಿಂಗ್ ಠಾಕೂರ ಮಾತನಾಡಿ, ಸಮ್ಮೇಳನ ಯಶಸ್ವಿಯಾಗಲು ಎಲ್ಲರ ಸಹಕಾರ ಹಾಗೂ ಶ್ರಮದಿಂದ ಸಾಧ್ಯವಾಗಿದೆ. ರಾಜ್ಯ ಸಮಿತಿ ಕೂಡಾ ಬೆನ್ನಲುಬಾಗಿ ನಿಂತಿರುವುದು ಸಹ ಮರೆಯಲಾರದ್ದು ಎಂದು ಹೇಳಿದರು.
ಪತ್ರಕರ್ತರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ದೇವಿಂದ್ರಪ್ಪ ಅವಂಟಿ, ರಾಜ್ಯ ಸಮಿತಿ ಸದಸ್ಯರಾದ ಹಣಮಂತರಾವ ಭೈರಾಮಡಗಿ, ದೇವಿಂದ್ರಪ್ಪ ಕಪನೂರ ಸೇರಿದಂತೆ ಮುಂತಾದವರಿದ್ದರು. ಇದೇ ಸಂದರ್ಭದಲ್ಲಿ ಅಪಘಾತದಲ್ಲಿ ನಿಧನರಾದ ಹಿರಿಯ ಪತ್ರಕರ್ತರಾದ ಗಂಗಾಧರ ಮೂರ್ತಿ ಹಾಗೂ ಜಿ.ಎಂ.‌ಕುಲಕರ್ಣಿ ಅವರ ನಿಧನಕ್ಕೆ ಎರಡು ನಿಮಿಷಗಳ ಮೌನಾಚರಣೆ ಸಲ್ಲಿಸಲಾಯಿತು.

LEAVE A REPLY

Please enter your comment!
Please enter your name here