ಕಲಬುರಗಿ, ಸೆ. 13: ಕಳೆದ ಎರಡು ವರ್ಷಗಳಿಂದ ಕೋವಿಡ್ ಕಾಟದಿಂದಾಗಿ ಶ್ರೀ ಗಣೇಶ ಉತ್ಸವಕ್ಕೆ ಅಡಚಣೆ ಆಗುತ್ತಿದ್ದು, ಕೋವಿಡ್ ಮಹಾಮಾರಿಯನ್ನು ಸಂಪೂರ್ಣವಾಗಿ ತೊಡೆದುಹಾಕುವ ನಿಟ್ಟಿನಲ್ಲಿ ರಾಜ್ಯ ಸರಕಾರ ರಾಜ್ಯದಲ್ಲಿ ಗಣೇಶ ಉತ್ಸವ ಐದು ದಿನಗಳ ಕಾಲ ಆಚರಿಸಲು ಮಾರ್ಗಸೂಚಿ ಹೊರಡಿಸಿತ್ತು.
ಆದರೆ ಕಲಬುರಗಿ ನಗರದ ಶ್ರೀ ಗಣೇಶ ಮಹಾಮಂಡಳಿ ಮಾತ್ರ ನಗರದಲ್ಲಿ 11 ದಿನಗಳ ಕಾಲ ಗಣೇಶ ಹಬ್ಬವನ್ನು ಯಾವುದೇ ಅಡಂಬರ, ಸಡಗರವಿಲ್ಲದೇ ಗಣೇಶನನ್ನು ಪ್ರತಿಷ್ಠಾಪಿಸಿ 11ನೇ ದಿನಕ್ಕೆ ಕೇವಲ 8 ರಿಂದ 10 ಜನರಿಗೆ ಮಾತ್ರ ಅನುಮತಿಸಿ ವಿಸರ್ಜನೆ ಅವಕಾಶ ಮಾಡಿಕೊಟ್ಟಿದೆ.
ಮಹಾಮಂಡಳಿಯ ಪದಾಧಿಕಾರಿಗಳೂ ಆಗಿರುವ ವಿಧಾನ ಪರಿಷತ್ ಸದಸ್ಯ ಶಶೀಲ್ ನಮೋಶಿ ಅವರು ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.
ಈ ಬಗ್ಗೆ ರಾಜ್ಯ ಪೋಲಿಸ್ ಉನ್ನತಾಧಿಕಾರಿಗಳೊಂದಿಗೆ ಮಾತನಾಡಿ, ಈ ಕ್ರಮ ಕೈಗೊಳ್ಳಲಾಗಿದೆ ಅವರು ನಮ್ಮ ಮನೀಷ ಪತ್ರಿಕೆಯ ಪ್ರತಿನಿಧಿಯೊಂದಿಗೆ ಮಾತನಾಡುತ್ತ ತಿಳಿಸಿದ್ದಾರೆ.
ಮೂರು ದಿನ, ಐದು ದಿನ, ಮತ್ತು ಒಂಬುತ್ತು ದಿನ ಅಲ್ಲದೇ ಸಾರ್ವಜನಿಕವಾಗಿ 11 ದಿನಗಳ ಕಾಲ ಶ್ರೀ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಿ ಯಾವುದೇ ಸಡಗರ, ಜನದಟ್ಟಣೆ, ಮನೋರಂಜನೆ ಕಾರ್ಯಕ್ರಮಗಳಿವಿಲ್ಲದೇ ಪೂಜೆ, ಪುನಸ್ಕಾರದೊಂದಿಗೆ ಸರಳವಾಗಿ ಆಚರಣೆ ಮಾಡುವ ಮೂಲಕ 11ನೇ ದಿನದಂದು ಕೋವಿಡ್ ನಿಯಮಗಳನುಸಾರವಾಗಿ ವಿಸರ್ಜನೆ ಮಾಡಬೇಕೆಂದು ಮನವಿ ಮಾಡಿಕೊಂಡಿದ್ದಾರೆ.
ಪಾಲಿಕೆಯ ಆಯುಕ್ತರಿಂದ ಸ್ಪಷ್ಟನೆ
ಈಗಾಗಲೇ ಸರಕಾರದ ಮಾರ್ಗಸೂಚಿಯಂತೆ ಪಾಲಿಕೆ, ಜಿಲ್ಲಾಡಳಿತ ಮತ್ತು ಪೋಲಿಸ್ ಇಲಾಖೆಗಳು ಜಂಟಿಯಾಗಿ ನಗರದಲ್ಲಿ ಸಾರ್ವಜನಿಕವಾಗಿ 5 ದಿನಗಳ ಗಣೇಶ ಮೂರ್ತಿ ಸ್ಥಾಪಿಸಿ, ಐದನೇ ದಿನಕ್ಕೆ ವಿಸರ್ಜನೆಗೆ ಆದೇಶ ಜಾರಿ ಮಾಡಿದೆ, 11 ದಿನಗಳ ಕಾಲ ಗಣೇಶ ವಿಗ್ರಹ ಪ್ರತಿಷ್ಠಾಪನೆಗೆ ಅನುಮತಿ ಸಿಕ್ಕಿರುವುದು ನಮಗೆ ಆದೇಶ ಬಂದಿಲ್ಲ, ಅಲ್ಲದೇ 5 ದಿನಗಳ ಗಣೇಶ ವಿಗ್ರಹ ಪ್ರತಿಷ್ಠಾನೆಗೆ ಮಾತ್ರ ಅವಕಾಶ ನೀಡಲಾಗಿದೆ ಎಂದರು.
11 ದಿನಗಳ ಕಾಲ ಮನೆಯಲ್ಲಿ ಸಣ್ಣ ಪುಟ್ಟ ಗಣೇಶ ವಿಗ್ರಹ ಸ್ಥಾಪನೆಗೆ ಸರಕಾರದ ಯಾವುದೇ ಅಭ್ಯಂತರವಿಲ್ಲ, ಆದರೂ ಎಲ್ಲರೂ ಕೊವಿಡ್ ನಿಯಮಗಳನ್ನು ಕಟ್ಟು ನಿಟ್ಟಾಗಿ ಪಾಲಿಸಿ, ಜಿಲ್ಲಾಡಳಿತ, ಪಾಲಿಕೆಯೊಂದಿಗೆ ಕೋವಿಡ್ ಮಾರಕ ಸೋಂಕು ತಡೆಗಟ್ಟಿ ಓಡಿಸಲು ಕೈಜೋಡಿಸಬೇಕೆಂದು ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡಿದ್ದಾರೆ.