ಕಲಬುರಗಿ.13.ಜು:ಸರ್ಕಾರದ ಯೋಜನೆಗಳನ್ನು ಫಲಾನುಭವಿಗಳಿಗೆ ತಲುಪಿಸುವಲ್ಲಿ ಬ್ಯಾಂಕ್ ಹಾಗೂ ವಿವಿಧ ಇಲಾಖೆಗಳು ಪ್ರಾಮಾಣಿಕವಾಗಿ ಮತ್ತು ತುರ್ತಾಗಿ ತಮ್ಮ ಕರ್ತವ್ಯವನ್ನು ನಿಭಾಯಿಸಬೇಕು ಎಂದು ಸಂಸದ ಡಾ. ಉಮೇಶ್ ಜಾಧವ ಅವರು ಅಭಿಪ್ರಾಯಪಟ್ಟರು.
ನಗರದ ಜಿಲ್ಲಾ ಪಂಚಾಯತ್‌ನ ನೂತನ ಸಭಾಂಗಣದಲ್ಲಿ ಮಂಗಳವಾರ ನಡೆದ ಜಿಲ್ಲಾ ಮಟ್ಟದ ಪರಿಶೀಲನಾ ಸಮಿತಿ ಸಭೆಯ ಅಧ್ಯಕ್ಷತೆಯನ್ನು ವಹಿಸಿ ಅವರು ಮಾತನಾಡುತ್ತಾ, ಸರ್ಕಾರದ ಉದ್ದೇಶ ಹಾಗೂ ಯೋಜನೆಗಳು ಯಶಸ್ವಿಯಾಗಬೇಕಾದರೆ ಬ್ಯಾಂಕ್‌ಗಳ ಪಾತ್ರ ಅತ್ಯಮೂಲ್ಯವಾಗಿದ್ದು, ಸರ್ಕಾರದ ಎಲ್ಲಾ ಯೋಜನೆ, ಅನುದಾನದ ಬಗ್ಗೆ ಬ್ಯಾಂಕ್ ಅಧಿಕಾರಿಗಳಿಗೆ ಮಾಹಿತಿ ಇರುತ್ತದೆ. ಹೀಗಾಗಿ ಫಲಾನುಭವಿಗಳಿಗೆ ಸರ್ಕಾರದ ಎಲ್ಲಾ ಯೋಜನೆ ತಲುಪಿಸುವ ಗುರಿ ಬ್ಯಾಂಕ್‌ಗಳು ಹೊಂದಿರಬೇಕು ಎಂದು ಸಲಹೆ ನೀಡಿದರು.
ಹಲವು ಬ್ಯಾಂಕ್‌ಗಳು ಮತ್ತು ಸರ್ಕಾರದ ವಿವಿಧ ಇಲಾಖೆಗಳಿಗೆ ಫಲಾನುಭವಿಗಳಾಗಲೀ, ಗ್ರಾಹಕರಾಗಲೀ ಸರ್ಕಾರದ ಯೋಜನೆ ಪಡೆಯಲು ಹೆಚ್ಚು ಅಲೆದು ಕಾಯುವಂತೆ ಮಾಡಬಾರದು ಎಂದು ಸಂಸದರು ಸಭೆಯಲ್ಲಿದ್ದ ಅಧಿಕಾರಿಗಳಿಗೆ ಸೂಚಿಸಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ದಿಲೀಷ್ ಶಶಿ ಅವರು ಮಾತನಾಡಿ, ಬ್ಯಾಂಕ್ ಅಧಿಕಾರಿಗಳು ಸೂಕ್ತ ಸಮಯಕ್ಕೆ ನಿರ್ಧಾರವನ್ನು ತೆಗೆದುಕೊಂಡು, ಫಲಾನುಭವಿಗಳ ಸ್ಥಳಕ್ಕೆ ಭೇಟಿ ಮಾಡಿ ಸರ್ಕಾರದ ಅನುದಾನ, ಯೋಜನೆಗಳನ್ನು ಅರ್ಹ ಫಲಾನುಭವಿಗಳಿಗೆ ತಲುಪಿಸುವಂತೆ ಮಾಡಬೇಕು ಎಂದು ಅವರು ಹೇಳಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಲೀಡ್ ಬ್ಯಾಂಕ್ ಮ್ಯಾನೇಜರ್ ಹಾಗೂ ಡಿ.ಎಲ್.ಆರ್.ಸಿ ಆಗಿರುವ ಇಂತೆಸಾರ್ ಹುಸೇನ್ ಅವರು, ಸರ್ಕಾರದ ವಿವಿಧ ಯೋಜನೆಯ ಲಾಭಪಡೆಯಲು ಅರ್ಜಿ ಸಲ್ಲಿಸಿದ ಅರ್ಹ ಫಲಾನುಭವಿಗಳ ಅರ್ಜಿಗಳನ್ನು ಬ್ಯಾಂಕ್‌ಗಳು ವಿನಾಕಾರಣ ಬಾಕಿ ಉಳಿಸಿಕೊಳ್ಳದೇ, ಅರ್ಹ ಫಲಾನುಭವಿಗಳ ಅರ್ಜಿಗಳನ್ನು ಕೂಡಲೇ ವಿಲೇವಾರಿ ಮಾಡಬೇಕು. ಫಲಾನುಭವಿಗಳಿಗೆ ಸರ್ಕಾರದ ಯೋಜನೆಗಳ ಸವಲತ್ತುಗಳು ದೊರಕುವಂತೆ ಮಾಡಲು ಪ್ರಾಮಾಣಿಕವಾಗಿ ನಿರ್ವಹಿಸಬೇಕು ಎಂದು ಜಿಲ್ಲೆಯ ವಿವಿಧ ಬ್ಯಾಂಕ್ ಅಧಿಕಾರಿಗಳಿಗೆ ತಿಳಿಸಿದರು.
ಜಿಲ್ಲೆಯ ವಿವಿಧ ತಾಲೂಕಿನ ಗೋಳಾ(ಬಿ), ದುತ್ತರಗಾಂವ್, ತಾಜಸುಲ್ತಾನಪುರ, ಐನೊಳ್ಳಿ, ಚೇಂಗಟಾ, ಹೊನಗುಂಟಾ, ಇಂಗಳಗಿ, ಮರತೂರ, ಇಟ್ಕಲ್, ಸೇಡಂ ಪಟ್ಟಣ, ಹೇರೂರ (ಬಿ), ಬಡದಾಳ, ಮಲ್ಲಾಬಾದ, ಹಸರಗುಂಡಗಿ, ಗಡಿಕೇಶ್ವರ ಮತ್ತು ಔರಾದ (ಬಿ) ವಿವಿಧ ಪ್ರದೇಶಗಳಲ್ಲಿ ನೂತನಾಗಿ ಒಟ್ಟು 16 ಬ್ಯಾಂಕ್ ಶಾಖೆ ಸ್ಥಾಪನೆಗೆ ಸಾರ್ವಜನಿಕರಿಂದ ಬೇಡಿಕೆಯಿದೆ ಎಂದು ವಿವರಿಸಿದರು.
ಈ ಸಭೆಯಲ್ಲಿ ವಿವಿಧ ಬ್ಯಾಂಕ್ ಹಾಗೂ ಸರ್ಕಾರದ ಹಲವು ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.