ಕಲಬುರಗಿ. ಮಾ. 19:ಜಿಲ್ಲಾಧಿಕಾರಿ ವಿ.ವಿ.ಜ್ಯೋತ್ಸ್ನಾ ಅವರು ಶುಕ್ರವಾರ ಇಲ್ಲಿನ ಜಿಮ್ಸ್ ಲಸಿಕಾ ಕೇಂದ್ರದಲ್ಲಿ ಕೋವಿಶೀಲ್ಡ್ ಲಸಿಕೆಯ ಎರಡನೇ ಡೋಸ್ ಪಡೆದರು.
ನಂತರ ಮಾತನಾಡಿದ ಅವರು ಈ ಹಿಂದೆ ಫೆಬ್ರವರಿ 8 ರಂದು ಮೊದಲ ಡೋಸ್ ಪಡೆದಿದ್ದು, ನಾಲ್ಕು ವಾರದ ನಂತರ ಇಂದು ಎರಡನೇ ಡೋಸ್ ಪಡೆದಿದ್ದೇನೆ ಎಂದರು.
60 ವರ್ಷ ಮೇಲ್ಪಟ್ಟವರಿಗೆ ಮತ್ತು 45 ರಿಂದ 59 ವರ್ಷದೊಳಗಿನ ದೀರ್ಘಕಾಯಿಲೆಯಿಂದ ಬಳಲುತ್ತಿರುವವರಿಗೆ ಕೋವಿಡ್ ಲಸಿಕೆ ನೀಡಲಾಗುತ್ತಿದ್ದು, ಅದರಂತೆ ಇಂದು ನಾನು ನನ್ನ ತಂದೆಯವರಿಗೆ ಕೋವಿಡ್ ಲಸಿಕೆ ಕೊಡಿಸಿದ್ದು, ನನಗೆ ಸಂತಸ ತಂದಿದೆ. ನಾನು ಚಿಕ್ಕವಳಿದ್ದಾಗ ನನ್ನ ತಂದೆಯವರು ನನಗೆ ಬಿ.ಸಿ.ಜಿ. ಲಸಿಕೆ ಕೊಡಿಸಿದ್ದನ್ನು ಇದೇ ಸಂದರ್ಭದಲ್ಲಿ ಅವರು ಸ್ಮರಿಸಿದರು.
ಕೋವಿಡ್ ಲಸಿಕೆ ಸುರಕ್ಷಿತವಾಗಿದ್ದು, ಯಾವುದೇ ಆತಂಕವಿಲ್ಲದೆ ಲಸಿಕೆ ಪಡೆಯಬಹುದಾಗಿದೆ. ಕೊರೋನಾ ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ಮುಂಜಾಗ್ರತವಾಗಿ ಪ್ರತಿಯೊಬ್ಬರು ತಮ್ಮ ತಂದೆ-ತಾಯಿ ಹಾಗೂ ಮನೆಯಲ್ಲಿರುವ ಹಿರಿಯರಿಗೆ ಕೋವಿಡ್ ಲಸಿಕೆ ಕೊಡಿಸಲು ಮುಂದಾಗುವ ಮೂಲಕ ಮಕ್ಕಳು ತಮ್ಮ ಜವಾಬ್ದಾರಿ ಪೂರೈಸಬೇಕು ಎಂದು ವಿ.ವಿ.ಜ್ಯೋತ್ಸಾö್ನ ಅವರು ಕರೆ ನೀಡಿದರು.
ಲಸಿಕೆ ಪಡೆದ ಜಿಲ್ಲಾಧಿಕಾರಿ ವಿ.ವಿ.ಜ್ಯೋತ್ಸಾö್ನ ಅವರ ತಂದೆ 72 ವರ್ಷದ ಜೋಷಿ ಅವರು ಮಾತನಾಡಿ ಲಸಿಕೆ ಸುರಕ್ಷಿತವಾಗಿದ್ದು 60 ವರ್ಷ ಮೇಲ್ಪಟ್ಟ ಪ್ರತಿಯೊಬ್ಬರು ಪಡೆಯುವ ಅವಶ್ಯತೆ ಇದೆ. ಯಾವುದೇ ಭಯವಿಲ್ಲದೆ ಲಸಿಕೆ ಪಡೆಯಿರಿ ಎಂದರು.
ಲಸಿಕೆ ಪಡೆದ ನಂತರ ಜಿಲ್ಲಾಧಿಕಾರಿ ವಿ.ವಿ.ಜ್ಯೋತ್ನಾ ಅವರು ತಮ್ಮ ತಂದೆ 72 ವರ್ಷದ ಜೋಷಿ ಅವರೊಂದಿಗೆ ಸಾರ್ವಜನಿಕರೊಂದಿಗೆ ಲಸಿಕಾ ಕೇಂದ್ರದಲ್ಲಿ ಅರ್ಧ ಗಂಟೆಗಳ ಕಾಲ ವೈದ್ಯರ ನಿಗಾದಲ್ಲಿ ಇದ್ದರು.
ಈ ಸಂದರ್ಭದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರಾಜಶೇಖರ ಮಾಲಿ, ಜಿಮ್ಸ್ ಕಾಲೇಜಿನ ಪ್ರಾಂಶುಪಾಲ ಡಾ.ಉಮೇಶ ಸೇರಿದಂತೆ ನರ್ಸಿಂಗ್ ಸಿಬ್ಬಂದಿಗಳು ಇದ್ದರು.