ನ್ಯಾಯಾಲಯದ ಆದೇಶ ಧಿಕ್ಕರಿಸಿದ ಪಟೇಲ್ ವಿರುದ್ಧ ಕ್ರಮಕ್ಕೆ ಮುಂದಾಗದ ಡಿಸಿ ವಿರುದ್ಧ ಕಾಂತಾ ಸಿಎಂಗೆ ದೂರು

0
970

ಕಲಬುರಗಿ ಮಾ 15: ಕಾನೂನು ಗಾಳಿಗೆ ತೂರಿ, ಕೃಷಿ ಜಮೀನಿನಲ್ಲಿ ಶಾದಿ ಮಹಲ್ ನಿರ್ಮಿಸಿದ ಮಾಜಿ ಪಾಲಿಕೆ ಸದಸ್ಯನ ವಿರುದ್ಧ ಕ್ರಮಕ್ಕೆ ಹಿಂದೆಟು ಹಾಕುತಿರುವ ಜಿಲ್ಲಾಧಿಕಾರಿಗಳ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಮುಖ್ಯಮಂತ್ರಿಗಳಿಗೆ ದೂರು ನೀಡಿದ್ದಾಗಿ ಮಾಜಿ ಸಚಿವ ಎಸ್.ಕೆ. ಕಾಂತಾ ಅವರು ತಿಳಿಸಿದ್ದಾರೆ.
ಅವರು ಮಂಗಳವಾರ ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತ, ಕಲಬುರಗಿ ತಾಲೂಕಿನ ಜಾಫರಾಬಾದ ಗ್ರಾಮದ ರಿಂಗ್ ರಸ್ತೆಗೆ ಹೊಂದಿಕೊAಡಿರುವ ಸರ್ವೆ.ನಂ 30/1 ರ 2.20 ಎಕರೆ ಜಮೀನಿನಲ್ಲಿ ಮಾಜಿ ಮಹಾನಗರಪಾಲಿಕೆ ಸದಸ್ಯ ಅಲಿಮುದ್ದೀನ್ ಪಟೇಲ ಎಂಬುವವರು ಕ್ಯೂಪಿ ಪ್ಯಾಲೇಸ್ ಎಂಬ ಸಭಾಭವನ ನಿರ್ಮಿಸಿ ವಾಣಿಜ್ಯ ಉದ್ಧೇಶಕ್ಕಾಗಿ ಬಳಸುತ್ತಿದ್ದಾರೆ. ಈ ನಿವೇಶನ ಕೃಷಿಯೇತರ ಭೂಮಿಯಾಗಿ ಪರಿವರ್ತನೆ ಆಗಿಲ್ಲ. ಕಟ್ಟಡ ನಿರ್ಮಾಣಕ್ಕೆ ಇತರ ಇಲಾಖೆಗಳ ಪರವಾನಿಗೆ ಪಡೆದಿಲ್ಲ.ಈ ಕುರಿತು ಕಠಿಣ ಕ್ರಮ ಜರುಗಿಸಲು 2019 ರಲ್ಲಿ ಮಹಾನಗರ ಪಾಲಿಕೆ ಮತ್ತು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದೆ ಎಂದ ಕಾಂತಾ ಅವರು ಮುಂದೆ 2020 ರ ಜುಲೈ 10 ರಂದು ಅಂದಿನ ಜಿಲ್ಲಾಧಿಕಾರಿ ಬಿ ಶರತ್ ಅವರು ಅಲಿಮುದ್ದೀನ್ ಪಟೇಲಗೆ ನೋಟೀಸ್ ಜಾರಿ ಮಾಡಿದ್ದರು.ಜಿಲ್ಲಾಧಿಕಾರಿಗಳ ನೋಟೀಸಿಗೆ ಪ್ರತಿಯಾಗಿ ಅಲಿಮುದ್ದೀನ್ ಪಟೇಲ ಉಚ್ಚ ನ್ಯಾಯಾಲಯದಲ್ಲಿ ರಿಟ್ ಅರ್ಜಿ ಸಲ್ಲಿಸಿದ್ದರು ಎಂದು ಹೇಳಿದರು.
ಉಚ್ಚ ನ್ಯಾಯಾಲಯವು 2020 ಜುಲೈ 30 ರ ತನ್ನ ಆದೇಶದಲ್ಲಿ “ನಗರ ಯೋಜನೆಯ ಮಾಸ್ಟರ್ ಪ್ಲಾನ್ ನಲ್ಲಿ ವಾಣಿಜ್ಯ ಉದ್ದೇಶಕ್ಕಾಗಿ ಅವಕಾಶವಿದ್ದಲ್ಲಿ ಅರ್ಜಿದಾರರು ಒಂದು ತಿಂಗಳು ಒಳಗಾಗಿ ವಾಣಿಜ್ಯ ಉದ್ದೇಶಕ್ಕಾಗಿ ಎನ್ ಎ ಪರವಾನಿಗೆ ಅರ್ಜಿ ಸಲ್ಲಿಸತಕ್ಕದ್ದು.ಜಿಲ್ಲಾಧಿಕಾರಿಗಳು ಮನವಿ ಪರಿಶೀಲಿಸಿ ದಂಡ ವಿಧಿಸಿ ವಿವಿಧ ಇಲಾಖೆಗಳ ಅಭಿಪ್ರಾಯ ಪಡೆದು ಎನ್ ಎ ಆದೇಶ ಪಡೆದ ನಂತರ ಪಾಲಿಕೆಯಿಂದ ಘಟನೋತ್ತರ ಮಂಜೂರಾತಿ ಪಡೆದು ಈ ಕಟ್ಟಡವನ್ನು ನಿಯಮದನ್ವಯ ಪ್ಲಾನ್ ಪ್ರಕಾರ ಕಡ್ಡಾಯವಾಗಿ ಮಂಜೂರಾತಿಯನ್ನು ಪಡೆಯತಕ್ಕದ್ದು. ಈ ಪ್ರಕ್ರಿಯೆ ಮುಗಿಯುವ ತನಕ ಈ ಜಮೀನಿನಲ್ಲಿ ಯಾವುದೇ ಕಾಮಗಾರಿ ಕೈಗೊಳ್ಳಬಾರದು. ಸಾರ್ವಜನಿಕರು ಸೇರುವ ಉದ್ದೇಶಕ್ಕಾಗಿ ಬಳಸಬಾರದು ” ಎಂದು ಹೇಳಿದೆ
ಆದರೆ ನ್ಯಾಯಾಲಯದ ನೀಡಿದ ಆದೇಶವನ್ನು ಧಿಕ್ಕರಿಸಿದ ಅಲಿಮುದ್ದೀನ್ ಪಟೇಲ ವಿರುದ್ದ ಕ್ರಮ ಕೈಗೊಳ್ಳಲು ಪದೇ ಪದೇ ಜಿಲ್ಲಾಧಿಕಾರಿ ಅವರಿಗೆ ಸಲ್ಲಿಸಿದ ಮನವಿಗಳಿಗೆ ಇದೂವರೆಗೆ ಯಾವದೇ ಸ್ಪಂದನೆ ಸಿಕ್ಕಿಲ್ಲ .ಎಂದು ಎಸ್ ಕೆ ಕಾಂತಾ ಆಕ್ರೋಶ ವ್ಯಕ್ತಪಡಿಸಿದರು. ಕಾನೂನು ಬಾಹಿರ ಕಾರ್ಯ ಎಸಗುವವರಿಗೆ ಪ್ರೋತ್ಸಾಹಿಸುವದು ಖಂಡನೀಯ ಎಂದರು.

LEAVE A REPLY

Please enter your comment!
Please enter your name here