ಕಲಬುರಗಿ: ಶಿಥಿಲಾವಸ್ಥೆಯ 180 ವರ್ಷಗಳ ಹಿಂದಿನ ಇಲ್ಲಿನ ಕಲಬುರಗಿ ತಾಲೂಕಾ ತಹಶಿಲ್ದಾರ ಕಚೇರಿಯಲ್ಲಿ ರಾಶಿಗಟ್ಟಲೇ ಇದ್ದ ಕಸದ ತ್ಯಾಜ್ಯವನ್ನು ತಹಶಿಲ್ದಾರರೇ ಮುಂದೆ ನಿಂತು ಸಿಬ್ಬಂದಿಗಳೊಂದಿಗೆ ಸ್ವಚ್ಚತಾ ಕಾರ್ಯ ಕೈಗೊಂಡರು.
ನಗರದ ಹೃದಯ ಭಾಗ ಸುಪರ ಮಾರ್ಕೆಟ್ ದಲ್ಲಿರುವ ಕಚೇರಿ ವಿಶಾಲವಾದ ಜಾಗವಿದೆ. ಹಳೆಯ ಕಟ್ಟಡ ಹಾಗೂ ಸೂಕ್ತ ನಿರ್ವಹಣೆ ಇಲ್ಲದಿದ್ದಕ್ಕೆ ಎಲ್ಲೆಂದರಲ್ಲಿ ಕಸದ ರಾಶಿ ಬಿದ್ದು ಗಬ್ಬೆದ್ದು ನಾರುತ್ತಿತ್ತು. ಈಚೆಗೆ ಕಟ್ಟಡ ಮೇಲ್ಚಾವಣಿ ಕುಸಿದು ಮಹಿಳಾ ಸಿಬ್ಬಂದಿ ಮೇಲೆ ಕುಸಿದು ಬಿದ್ದಿತ್ತು. ಆದರೆ ಕಳೆದ ಫೆ. 8ರಂದು ಶಿಗ್ಗಾಂವಿಯಿಂದ ವರ್ಗಾವಣೆಯಾಗಿ ಕಲಬುರಗಿ ತಹಶಿಲ್ದಾರರಾಗಿ ಕಾರ್ಯಭಾರ ವಹಿಸಿಕೊಂಡಿರುವ ಪ್ರಕಾಶ ಕುದರಿ ಅವರು ಕಚೇರಿ ಹಾಗೂ ಆವರಣದಲ್ಲಿನ ಕಸದ ರಾಶಿ ಹಾಗೂ ಯಾವುದೇ ಸಂದರ್ಭದಲ್ಲಿ ಆಪತ್ತು ಎದುರಾಗುವ ಕಚೇರಿಯ ಸಂಪೂರ್ಣ ಕಟ್ಟಡ ಎಳೆ+ ಎಳೆಯಾಗಿ ವೀಕ್ಷಿಸಿ ಸ್ವಚ್ಚತಾ ಕಾರ್ಯಕ್ಕೆ ಮುಂದಾಗಿದ್ದಾರೆ.
ಕಚೇರಿ ಆವರಣದಲ್ಲೇ ತಹಶಿಲ್ದಾರರ ವಸತಿ ಗೃಹವಿದೆ. ಆದರೆ ಏಳೆಂಟು ವರ್ಷಗಳಿಂದ ಬಳಕೆ ಮಾಡದಿದ್ದಕ್ಕೆ ಭೂತ ಬಂಗಲೆ ಎನ್ನುವಂತಾಗಿದೆ. ಗೃಹವನ್ನು ಸ್ವಚ್ಛತೆ ಗೊಳಿಸಿ ಬಳಕೆ ಮಾಡಿಕೊಳ್ಳಲು ಸಿದ್ದತೆ ಮಾಡಿಕೊಳ್ಳಲಾಗುತ್ತಿದೆ.
ಬರೀ ಕಚೇರಿ ಆವರಣ ಹಾಗೂ ಕಟ್ಟಡ ಸ್ಚಚ್ಚಗೊಳಿಸಿದರೆ ಸಾಲದು. ಬಹಳ ದಿನಗಳಿಂದ ಇತ್ಯರ್ಥಗೊಳ್ಳದೇ ಇರುವ ಅರ್ಜಿ ಗಳನ್ನು ವಿಲೇವಾರಿ ಮಾಡುವುದು, ಒಟ್ಟಾರೆ ಆಡಳಿತದಲ್ಲಿ ಪಾರದರ್ಶಕತೆ ತರಲು ಶ್ರಮಿಸಲಾಗುವಿದು ಎಂದು ತಹಶಿಲ್ದಾರ ಕುದುರೆ ತಿಳಿಸಿದರು.
ಕಚೇರಿ ಬಾಳಿಕೆ ಕುರಿತಾಗಿ ಲೋಕೋಪಯೋಗಿ ಇಲಾಖೆಯಿಂದ ವರದಿ ಪಡೆದು ನೆಲಸಮ ಮಾಡುವ ಸಂಬಂಧ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಹಾಗೂ ಜನಪ್ರತಿನಿಧಿಗಳೊಂದಿಗೆ ಚರ್ಚಿಸಲಾಗುವುದು. ನೆಲಸಮಗೊಳಿಸಲು ಪ್ರಾಚ್ಯ ವಸ್ತು ಇಲಾಖೆ ಅನುಮತಿ ನೀಡಲಾಗುತ್ತದೆಯೋ ಎಂಬುದನ್ನು ಕಾದು ನೋಡಬೇಕು. ತಹಶಿಲ್ದಾರ ಕಚೇರಿಯ ಮಿನಿ ವಿಧಾನಸೌಧ ಬೇರೆಡೆ ಹೊಸದಾಗಿ ನಿರ್ಮಿಸಲು ಮೂರ್ನಾಲ್ಕು ಕಡೆ ಸ್ಥಳ ಗುರುತಿಸಲಾಗುತ್ತಿದೆ. ಜಿಲ್ಲಾಧಿಕಾರಿ ಕಚೇರಿ ಪಕ್ಕದ ಎನ್ ಸಿಸಿ ಕಚೇರಿ ಸ್ಥಳಾಂತರವಾಗುತ್ತಿರುವುದರಿಂದ ಈ ಸ್ಥಳದಲ್ಲೇ ತಹಶಿಲ್ದಾರ ಕಚೇರಿ ನಿರ್ಮಾಣವಾಗಬೇಕು ಇಲ್ಲವೇ ಈಗಿರುವ ತಹಶಿಲ್ದಾರ ಕಚೇರಿ ಆವರಣದಲ್ಲೇ ಕಚೇರಿ ಸ್ಥಾಪನೆಯಾದರೆ ಸೂಕ್ತ ಎಂಬುದು ಸಾರ್ವಜನಿಕರ ಹಾಗೂ ತಮ್ಮ ಅಭಿಪ್ರಾಯವಾಗಿದೆ ಎಂದು ತಹಶಿಲ್ದಾರ ಪ್ರಕಾಶ ಕುದರಿ ಈ ಸಂದರ್ಭದಲ್ಲಿ ತಿಳಿಸಿದರು.