ಕಲಬುರಗಿ ಜ 23 : ಇತ್ತೀಚಿಗೆ ಕೇಂದ್ರ ಜಾರಿಗೆ ತಂದ ಕೃಷಿ ಸಂಬAಧಿತ ಮೂರು ಕಾಯಿದೆಗಳನ್ನು ವಿರೋಧಿಸಿ,ಅವುಗಳ ವಾಪಸ್ಸಿಗೆ ಆಗ್ರಹಿಸಿ, ದೆಹಲಿಯಲ್ಲಿ ರೈತರು ಜನವರಿ 26 ರಂದು ನಡೆಸುತ್ತಿರುವ ಟ್ರ‍್ಯಾಕ್ಟರ್ ರ‍್ಯಾಲಿಗೆ ಬೆಂಬಲಿಸಿ ನಗರದಲ್ಲಿ ಜನತಾ ಪರೇಡ್ ನಡೆಸಲಾಗುವದು ಎಂದು ಸಂಯುಕ್ತ ಕಿಸಾನ್ ಮೋರ್ಚಾ ವೇದಿಕೆ ಜಿಲ್ಲಾ ಸಮಿತಿ ಸಂಚಾಲಕ, ಮಾಜಿ ಶಾಸಕ ಬಿ.ಆರ್ ಪಾಟೀಲ ಇಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಅಂದು ನಡೆಸುವ ಜನತಾ ಪರೇಡದಲ್ಲಿ ಸುಮಾರು 500 ಟ್ರ‍್ಯಾಕ್ಟರ್ ಗಳನ್ನು ಸೇರಿಸಲಾಗುತ್ತಿದೆ. ಜ 26 ರಂದು ಬೆಳಿಗ್ಗೆ 11 ಗಂಟೆಗೆ ನಗರದ ಎಪಿಎಂಸಿ ಯಾರ್ಡ ನಿಂದ ಜನತಾ ಪರೇಡ್ ಆರಂಭವಾಗಲಿದೆ. ಟ್ರ‍್ಯಾಕ್ಟರಗಳಿಗೆ ರಾಷ್ಟ್ರಧ್ವಜ ಮಾತ್ರ ಕಟ್ಟಿಕೊಂಡು ,ಪರೇಡ್ ಮುಂಚೂಣಿಯಲ್ಲಿರುವ ಟ್ರ‍್ಯಾಕ್ಟರ್ ಗೆ ಭಾರತ ಸಂವಿಧಾನ ಪೀಠಿಕೆಯ ಕಟೌಟ್ ಕೂಡಿಸಲಾಗುವದು .ಸಹಸ್ರಾರು ಸಂಖ್ಯೆಯ ರೈತರು, ಕಾರ್ಮಿಕರು, ಪ್ರಗತಿಪರ ಚಿಂತಕರು ಪರೇಡ್‌ನಲ್ಲಿ ಭಾಗವಹಿಸುವರು.
ಎಪಿಎಂಸಿ ಯಾರ್ಡ ನಿಂದ ಜಗತ್ ವೃತ್ತ ,ಸರದಾರ ವಲ್ಲಭಬಾಯಿ ಪಟೇಲ್ ವೃತ್ತದ ಮಾರ್ಗವಾಗಿ ಜಿಲ್ಲಾಧಿಕಾರಿಗಳ ಕಚೇರಿ ತಲುಪಿ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಲಾಗುವದು ಎಂದು ವಿವರಿಸಿದರು.
ಸುದ್ದಿಗೋಷ್ಠಿಯಲ್ಲಿ ಎಸ್.ಆರ್ ಕಲ್ಲೂರ, ಶೌಕತ್ ಅಲಿ ಆಲೂರ, ಭೀಮಾಶಂಕರ ಮಾಡಿಯಾಳ, ನೀಲಾ ಕೆ, ಎಸ್.ಎಂ ಶರ್ಮಾ, ಸುನೀಲ ಮಾನ್ಪಡೆ ಸೇರಿದಂತೆ ಹಲವರಿದ್ದರು.