ವೈದ್ಯರು, ಪತ್ರಕರ್ತರಿಗಿದು ಸವಾಲಿನ ಸಮಯ: ಚೇತನ್ ಆರ್.

0
441

ಕಲಬುರಗಿ, ಜುಲೈ. 01:ಇಂಟರ್ನೆಟ್ ಮತ್ತು ಸಾಮಾಜಿಕ ಮಾಧ್ಯಮಗಳು ಉಚ್ಛ್ರಾಯ ಸ್ಥಿತಿಯಲ್ಲಿರುವ ಇಂದಿನ ದಿನಗಳಲ್ಲಿ ವೈದ್ಯರು ಮತ್ತು ಪತ್ರಕರ್ತರು ಸವಾಲಿನ ಸನ್ನಿವೇಶಗಳನ್ನು ಎದುರಿಸುತ್ತಿದ್ದಾರೆ ಎಂದು ಕಲಬುರಗಿ ನಗರದ ಪೊಲೀಸ್ ಕಮೀಷನರ್ ಚೇತನ್ ಆರ್ ಅಭಿಪ್ರಾಯಪಟ್ಟರು.
ನಗರದ ಪ್ರತಿಷ್ಠಿತ ಯುನೈಟೆಡ್ ಆಸ್ಪತ್ರೆಯಲ್ಲಿ ಸೋಮವಾರ ವೈದ್ಯರ ದಿನ ಮತ್ತು ಕನ್ನಡ ಪತ್ರಿಕೋದ್ಯಮ ದಿನದ ಅಂಗವಾಗಿ ಪತ್ರಕರ್ತರಿಗೆ ಮತ್ತು ಅವರ ಕುಟಂಬ ಸದಸ್ಯರಿಗೆ ಏರ್ಪಡಿಸಲಾಗಿದ್ದ ಉಚಿತ ಆರೋಗ್ಯ ಶಿಬಿರಕ್ಕೆ ಚಾಲನೆ ನೀಡಿ ಮಾತಾಡಿದ ಅವರು ಇಂಟರ್ನೆಟ್ ಮತ್ತು ಸಾಮಾಜಿಕ ಮಾಧ್ಯಮಗಳ ಯುಗದಲ್ಲಿ ಸತ್ಯವನ್ನು ಜನರಿಗೆ ತಿಳಿಸುವುದು ಒಂದು ಸವಾಲಿನ ಕೆಲಸವಾಗಿದೆ ಎಂದರು.
“ವೈದ್ಯರು ಬರೆದುಕೊಟ್ಟ ಔಷಧಿಗಳನ್ನು ಜನರು ಇಂಟರ್ನೆಟ್ಟಿನಲ್ಲಿ ಮತ್ತೊಮ್ಮೆ ಪರೀಕ್ಷಿಸುತ್ತಾರೆ. ಕೆವೊಂದು ವ್ಯಕ್ತಿಗಳು ತಮ್ಮ ರೋಗಗಳಿಗೆ ಇಂಟರ್ನೆಟ್ಟಿನಲ್ಲಿ ಉಚಿತವಾಗಿ ಸಿಗುವ ಸಲಹೆಗಳನ್ನು ಪಾಲಿಸಿ ಸ್ವಯಂ ಚಿಕತ್ಸೆ ಮಾಡಿಕೊಳ್ಳಲು ಪ್ರಯತ್ನಿಸುತ್ತಾರೆ. ಇದರಿಂದ ರೋಗಿಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಸಾಧ್ಯತೆ ಹೆಚ್ಚಿರುತ್ತದೆ. ಇದನ್ನೆಲ್ಲಾ ನಿಭಾಯಿಸುವ ಹೆಚ್ಚುವರಿ ಹೊರೆ ಈಗಿನ ಡಿಜಿಟಲ್ ಯುಗದಲ್ಲಿ ವೈದ್ಯರ ಹೆಗಲೇರಿದೆ,” ಎಂದು ಚೇತನ್ ಅಭಿಪ್ರಾಯಪಟ್ಟರು.

ಇಂಟರ್ನೆಟ್ ಮತ್ತು ಸಾಮಾಜಿ ಮಾಧ್ಯಮಗಳ ಭರಾಟೆಯನ್ನು ಪತ್ರಿಕಾರಂಗಕ್ಕೂ ಹೋಲಿಸಿದ ಪೊಲೀಸ್ ಆಯುಕ್ತರು, ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುವ ಸುಳ್ಳು ಮತ್ತು ಅರೆಸತ್ಯ ಸುದ್ದಿಗಳನ್ನು ಎದುರಿಸಿ ಸತ್ಯವನ್ನು ಜನರಿಗೆ ತಲುಪಿಸಬೇಕಾದ ಮಹತ್ವಪೂರ್ಣ ಜವಾಬ್ದಾರಿ ಈಗ ಮುದ್ರಣ ಮತ್ತುದೂರದರ್ಶನ ಮಾಧ್ಯಮಗಳ ಮೇಲಿದೆ ಎಂದರು.
“ಈಗ ಬಹುತೇಕ ಸುದ್ದಿಗಳು ಮೊದಲು ಹೊರಬೀಳುವುದು ಸಾಮಾಜಿಕ ಜಾಲತಾಣಗಳಲ್ಲಿಯೆ. ತಾವೇ ಮೊದಲು ಸುದ್ದಿಗಳನ್ನು ಕೊಡಬೇಕೆಂಬ ಒತ್ತಡದಲ್ಲಿರುವ ಟೀವಿ ಮತ್ತು ಮುದ್ರಣ ಮಾಧ್ಯಸಮಗಳಿಗೆ ಇವು ಹೊಸ ಸವಾಲುಗಳಾಗಿ ಆವಿರ್ಭವಿಸಿವೆ. ಸಾಮಾಜಿಕ ಜಾಲತಾಣಗಳಲ್ಲಿ ಬರುವ ಬಹುತೇಕ ಸುದ್ದಿಗಳು ಸುಳ್ಳು ಸುದ್ದಿಗಳಾಗಿರುತ್ತವೆ ಅಥವಾ ಅರ್ಧಸತ್ಯದ ಸುದ್ದಿಗಳಾಗಿರುತ್ತವೆ. ಒಂದು ಘಟನೆಯನ್ನು ಯಾರೋ ಒಬ್ಬರು ವೀಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟುಬಿಡುತ್ತಾರೆ. ಜನರು ಅದನ್ನೇ ಸತ್ಯ ಎಂದು ನಂಬಿ ಬಿಡುತ್ತಾರೆ. ಇದರಿಂದ ಕಾನೂನು ಸುವ್ಯವಸ್ಥೆಯ ಸಮಸ್ಯೆಗಳೂ ಎದುರಾಗುತ್ತವೆ. ಇಂತ ಸುಳ್ಳು ಮತ್ತುಅರೆಸತ್ಯ ಸುದ್ದಿಗಳನ್ನು ಮತ್ತು ಅರೆಬೆಂದ ನಿರೂಪಣೆಗಳನ್ನು ಎದುರಿಸುತ್ತಾ ಸತ್ಯವನ್ನು ಜನರಿಗೆ ತಲುಪಿಸಬೇಕಾದ ಮಹತ್ವಪೂರ್ಣ ಜವಾಬ್ದಾರಿ ಈಗ ಪಾರಂಪರಿಕ ಮಾಧ್ಯಮಗಳ ಮೇಲಿದೆ,” ಎಂದು ಚೇತನ್ ಅಭಿಪ್ರಾಯಪಟ್ಟರು.
ಯುನೈಟೆಡ್ ಆಸ್ಪತ್ರೆಯ ಅಧ್ಯಕ್ಷರೂ ಹಾಗೂ ವ್ಯವಸ್ಥಾಪಕ ನಿರ್ದೇಶಕರೂ ಆಗಿರುವ ಡಾ. ವಿಕ್ರಮ್ ಸಿದ್ದಾರೆಡ್ಡಿಯವರು ಮಾತಾಡುತ್ತಾ ಅಫಘಾತಗಳನ್ನು ತಡೆಯುವ ನಿಟ್ಟಿನಲ್ಲಿ ಹಾಗೂ ಸಂಚಾರಿ ನಿಯಮಗಳ ಬಗ್ಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಕಲಬುರಗಿ ಪೊಲೀಸರು ಕೈಗೊಂಡಿರುವ ಕ್ರಮಗಳನ್ನು ಶ್ಲಾಘಿಸಿದರು. ಜೊತೆಗೆ, ವೈದ್ಯರ ದಿನಾಚರಣೆ ಮತ್ತು ಕನ್ನಡ ಪತ್ರಿಕೋದ್ಯಮ ದಿನಾಚರಣೆಯ ಅಂಗವಾಗಿ ಪತ್ರಕರ್ತರಿಗೆ ಮತ್ತು ಅವರ ಕುಟುಂಬ ಸದಸ್ಯರಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ ಆಯೋಜಿಸಲು ಅವಕಾಶ ಕೊಟ್ಟ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘಕ್ಕೆ ಧನ್ಯವಾದ ಸಲ್ಲಿಸಿದರು.
ಹೆಚ್ಚುರವರಿ ಪೊಲೀಸ್ ಅಧೀಕ್ಷಕ ಶ್ರೀನಿಧಿ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಬಾಬುರಾವ್ ಯಡ್ರಾಮಿ, ಯುನೈಟೆಡ್ ಆಸ್ಪತ್ರೆಯ ನಿರ್ದೇಶಕಿ ಡಾ. ವೀಣಾ ಸಿದ್ದಾರೆಡ್ಡಿ, ಮೂಳೆತಜ್ಞರಾದ ಡಾ. ರಾಜು ಕುಲ್ಕರ್ಣಿ ಮತ್ತು ಡಾ. ನಿಶಾಂತ್ ಜಾಜಿ, ಜನರಲ್ ಸರ್ಜನ್ ಡಾ. ಮೊಹಮದ್ ಅಬ್ದುಲ್ ಬಶೀರ್, ಹೃದಯ ತಜ್ಞ ಡಾ. ಬಸವಪ್ರಭು ಅಮರಖೇಡ್, ಓರಲ್ ಮ್ಯಾಕ್ಸಿಲೋಫೇಶಿಯಲ್ ಚಿಕಿತ್ಸಕ ಡಾ. ಉಡುಪಿ ಕೃಷ್ಣ ಜೋಶಿ, ಅರವಳಿಕೆ ತಜ್ಞರಾದ ಡಾ. ಸುದರ್ಶನ್ ಲಾಖೆ, ಡಾ. ರಾಕೇಶ್ ಬೇಂದ್ರೆ ಮತ್ತು ಡಾ. ಕೃಷ್ಣ ರಾಥೋಡ್, ನರರೋಗ ತಜ್ಞ ಡಾ. ವಿನಯಸಾಗರ್ ಶರ್ಮ, ಕಿವಿ, ಮೂಗು ಮತ್ತು ಗಂಟಲು ತಜ್ಞ ರಟಕಲ್ ಡಾ. ಕೇದಾರನಾಥ, ಫಿಜಿಯೋಥೆರೆಪಿಸ್ಟ್ ಡಾ. ಅಬ್ದುಲ್ ಹಕೀಮ್ ಮತ್ತಿತರ ಹಿರಿಯ ತಜ್ಞವೈದ್ಯರು ಈ ಸಂದರ್ಭದಲ್ಲಿ ಹಾಜರಿದ್ದರು.
ಯುನೈಟೆಡ್ ಆಸ್ಪತ್ರೆಯ ನಿರ್ವಾಹಕ ನೀಡಿದ ಮಾಹಿತಿಯ ಪ್ರಕಾರ ಸುಮಾರು 500ಕ್ಕೂ ಹೆಚ್ಚೂ ಜನರು (ಪತ್ರಕರ್ತರು ಮತ್ತು ಅವರ ಕುಟುಂಬ ಸದಸ್ಯರು) ಈ ಉಚಿತ ಆರೋಗ್ಯ ತಪಾಸಣಾ ಶಿಬಿರದ ಪ್ರಯೋಜನ ಪಡೆದುಕೊಂಡರು. ಸಾಮಾನ್ಯ ಶಸ್ತ್ರಚಿಕಿತ್ಸೆ, ಮೂಳೆ, ನರರೋಗ, ಹೃದಯರೋಗ, ಸ್ತ್ರೀರೋಗ, ನೇತ್ರರೋಗ ಮತ್ತು ಸಾಮಾನ್ಯ ಔಷಧಿ ವಿಭಾಗಗಳ ಹಿರಿಯ ವೈದ್ಯರು ಉಚಿತವಾಗಿ ಸಲಹೆ, ಸೂಚನೆಗಳನ್ನು ನೀಡಿದರು. ವೈದ್ಯರ ಸಲಹೆಯ ಮೇರೆಗೆ ಅನೇಕ ರಕ್ತಪರೀಕ್ಷೆ, ಸಿಟಿ ಸ್ಕ್ಯಾನ್, ಆಲ್ಟ್ರಾಸೌಂಡ್, ಎಕ್ಸ್—ರೆ, ಇಸಿಜಿ ಮುಂತಾದ ರೋಗಪತ್ತೆ ಪರೀಕ್ಷೆಗಳನ್ನೂ ಉಚಿತವಾಗಿ ಮಾಡಲಾಯಿತು. ವೈದ್ಯರು ಸೂಚಿಸಿದ ಔಷಧಿಗಳನ್ನೂ ಉಚಿತವಾಗಿ ನೀಡಲಾಯಿತು.

LEAVE A REPLY

Please enter your comment!
Please enter your name here