ಹಿಂದಿನ ಗತ್ತಿನಲ್ಲಿಯೇ ಲೋಕಾಯುಕ್ತ ಸಂಸ್ಥೆ ಕಾರ್ಯನಿರ್ವಹಿಸುತ್ತದೆ: ಅರ್ಜಿಗಳು ತ್ವರಿತ ವಿಲೇವಾರಿ ಮಾಡಿ, ವಿಳಂಬ ಧೋರಣೆ ಸಲ್ಲದು:ಎ.ಆರ್.ಕರ್ನೂಲ

0
696

ಕಲಬುರಗಿ,ಡಿ.15:ಎಸಿಬಿ ರದ್ದಾಗಿರುವುದಿಂದ ಈಗ ಲೋಕಾಯುಕ್ತ ಸಂಸ್ಥೆ ಮತ್ತೆ ಹಿಂದಿನ ಗತ್ತಿನಲ್ಲಿಯೇ ಕಾರ್ಯನಿರ್ವಹಿಸುತ್ತದೆ ಎಂದು ಕರ್ನಾಟಕ ಲೋಕಾಯುಕ್ತ ಕಲಬುರಗಿ ಎಸ್.ಪಿ. ಎ.ಆರ್. ಕರ್ನುಲ ಹೇಳಿದ್ದಾರೆ.
ಗುರುವಾರ ಕಲಬುರಗಿ ಜಿಲ್ಲಾ ಪಂಚಾಯತ್ ಹೊಸ ಸಭಾಂಗಣದಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳ ಸಮಕ್ಷಮದಲ್ಲಿ ಸಾರ್ವಜನಿಕರ ಅಹವಾಲು ಆಲಿಸಿ ಮಾತನಾಡಿದರು.
ಕರ್ನಾಟಕ ಲೋಕಾಯುಕ್ತ ನ್ಯಾ.ಬಿ.ಎಸ್.ಪಾಟೀಲ ಅವರ ನಿರ್ದೇಶನದಂತೆ ಜಿಲ್ಲಾ ಮತ್ತು ತಾಲೂಕು ಮಟ್ಟದಲ್ಲಿ ಸಾರ್ವಜನಿಕರು ಅಹವಾಲು ಆಲಿಸುತ್ತಿದ್ದು, ಅದರ ಭಾಗವಾಗಿ ಇಂದಿಲ್ಲಿ ಕಾರ್ಯಕ್ರಮ ಆಯೋಜಿಸಿದೆ. ಸರ್ಕಾರಿ ಕಚೇರಿಗೆ ದಿಢೀರ್ ಭೇಟಿ ನೀಡಿ ಪರಿಶೀಲಿಸುವ ಮತ್ತು ಅಕ್ರಮ ಕಂಡುಬAದಲ್ಲಿ ಸ್ವಯಂಪ್ರೇರಿತ ಪ್ರಕರಣ ದಾಖಲಿಸುವ ಅಧಿಕಾರ ಲೋಕಾಯುಕ್ತ ಪೊಲೀಸರಿಗಿದೆ ಎಂದರು.
ಸರ್ಕಾರಿ ಕಚೇರಿಗೆ ಸಾರ್ವಜನಿಕರು ಸಲ್ಲಿಸುವ ಅರ್ಜಿಗಳನ್ನು ತ್ವರಿತ ವಿಲೇವಾರಿ ಮಾಡಬೇಕು. ಅನಗತ್ಯ ವಿಳಂಬ ಧೋರಣೆ ಸಲ್ಲದು ಎಂದು Àರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ನೌಕರರು ಕಚೇರಿ ಸಮಯ ಪಾಲನೆ ಮಾಡಬೇಕು. ಕಚೇರಿಯಲ್ಲಿ ಚಲನವಲನ ವಹಿ, ನಗದು ಘೋಷಣೆ ವಹಿ ನಿರ್ವಹಿಸಬೇಕು. ಕಚೇರಿಯಲ್ಲಿ ಕಡತ, ದಾಖಲೆಗಳನ್ನು ಸರಿಯಾಗಿ ಇಟ್ಟುಕೊಂಡು ನಿರ್ವಹಣೆ ಮಾಡಬೇಕು. ಯಾರಾದರು ಅರ್ಜಿ ಸಲ್ಲಿಸಿದರೆ ದಾಖಲೆ ಇಲ್ಲ, ವರ್ಗಾವಣೆಯಾದವರು ನಮಗೆ ನೀಡಿಲ್ಲ ಎಂಬ ಉತ್ತರ ಒಪ್ಪಲು ಸಾಧ್ಯವಿಲ್ಲ. ಯಾವುದೇ ಅಧಿಕಾರಿ, ಸಿಬ್ಬಂದಿ ವರ್ಗಗೊಂಡಲ್ಲಿ ಕಡತ, ದಾಖಲೆಗಳನ್ನು ಸಂಬoಧಿಸಿದವರಿಗೆ ಹಸ್ತಾಂತರಿಸಬೇಕು. ಜಿಲ್ಲೆಯಾದ್ಯಂತ ಅಗಾಗ ತಾವು ಕಚೇರಿಗೆ ಭೇಟಿ ನೀಡಿ ಪರಿಶೀಲಿಸುವೆ ಎಂದರು.

ಆಸ್ಪತ್ರೆ ಆವರಣದಲ್ಲಿ ಉದ್ಯಾನವನ ನಿರ್ಮಿಸಿ:
ಅರೋಗ್ಯ ಕೇಂದ್ರದಲ್ಲಿ ಶುಚಿತ್ವ ಕಾಪಾಡುವುದುರ ಜೊತೆಗೆ ಆವರಣದಲ್ಲಿ ಸಾಧ್ಯವಾದರೆ ಉದ್ಯಾನವನ ನಿರ್ಮಿಸಬೇಕು. ಇದರಿಂದ ಅಲ್ಲಿಗೆ ಬರುವ ರೋಗಿಗಳಿಗೆ ಕ್ಷಣ ಹೊತ್ತಾದರು ಮನಸ್ಸಿಗೆ ಉಲ್ಲಾಸ ನೀಡುತ್ತದೆ ಎಂದು ಡಿ.ಹೆಚ್.ಓ ಡಾ.ರಾಜಶೇಖರ ಪಾಟೀಲ ಅವರಿಗೆ ನಿರ್ದೇಶನ ನೀಡಿದರು.
ತುರ್ತಾಗಿ ಮಾಹಿತಿ ಕೊಡಬೇಕು:
ಲೋಕಾಯುಕ್ತದಲ್ಲಿ ದಾಖಲಾಗುವ ಪ್ರಕರಣವನ್ನು ಕಾಲಮಿತಿಯಲ್ಲಿ ವಿಚಾರಣೆ ನಡೆಸಿ ವಿಲೇವಾರಿ ಮಾಡಬೇಕಾಗುತ್ತದೆ. ಹೀಗಾಗಿ ವಿಚಾರಣೆ ಕುರಿತಂತೆ ಮಾಹಿತಿ ಕೇಳಿದಾಗ ಇಲಾಖೆಯ ಅಧಿಕಾರಿಗಳು ಕಾಲಮಿತಿಯಲ್ಲಿಯೇ ಮಾಹಿತಿ ನೀಡಿ ವಿಚಾರಣೆಗೆ ಸಹಕರಿಸಬೇಕು ಎಂದ ಲೋಕಾಯುಕ್ತ ಡಿ.ಎಸ್.ಪಿ ಸಿದ್ದಣಗೌಡ ಪಾಟೀಲ ಅವರು, ಪ್ರಾಥಮಿಕ ಅರೋಗ್ಯ ಕೇಂದ್ರದಲ್ಲಿ ಮಧ್ಯಾಹ್ನದ ನಂತರ ವೈದ್ಯರಿರಲ್ಲ ಎಂಬ ಸಾಮಾನ್ಯ ದೂರುಗಳು ಬರುತ್ತಿವೆ. ಡಿ.ಹೆಚ್.ಓ ಅವರು ಆಗಾಗ ಭೇಟಿ ನೀಡಿ ಪರಿಶೀಲಿಸಬೇಕು ಎಂದರು.
ಅಕ್ರಮ ಗಣಿಗಾರಿಕೆ ನಿಲ್ಲಿಸಿ:
ಕಲಬುರಗಿ ತಾಲೂಕಿನ ಬೇಲೂರ(ಜೆ) ಗ್ರಾಮದ ಗೋಮಾಳ ಜಮೀನಿನಲ್ಲಿ ಅಕ್ರಮ ಗಣಿಗಾರಿಕೆ ನಡೆಯುತ್ತಿದ್ದು, ಸಂಬAಧಿಸಿದವರ ಮೇಲೆ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರೊಬ್ಬರು ಲೋಕಾಯುಕ್ತರ ಎದುರು ಹೇಳಿಕೊಂಡರು. ತಮ್ಮ ನಿವೇಶನವನ್ನು ಸುಳ್ಳು ದಾಖಲೆ ಸೃಷ್ಟಿಸಿ ಬೇರೊಬ್ಬರಿಗೆ ಹೆಸರಿಗೆ ವರ್ಗಾಯಿಸಲು ಸಹಕಾರ ನೀಡಿದ ಪಾಲಿಕೆ ಅಧಿಕಾರಿ-ಸಿಬ್ಬಂದಿಗಳ ಮೇಲೆ ಕ್ರಮ ಕೈಗೊಳ್ಳಬೇಕೆಂದು ಮೋಹಿಯುದ್ದಿನ್ ಪಾಶಾ ದೂರಿದರು. ಕಲಬುರಗಿ ತಾಲೂಕಿನ ಕುಮಸಿ ಗ್ರಾ.ಪಂ.ಯಲ್ಲಿ 14ನೇ ಹಣಕಾಸಿನ ಯೋಜನೆಯಡಿ ಕೈಗೊಂಡ ಕಾಮಗಾರಿಗಳಲ್ಲಿ ಅವ್ಯವಹಾರವಾಗಿದ್ದು, ತನಿಖೆ ನಡೆಬೇಕೆಂದು ಗ್ರಾ.ಪಂ.ಸದಸ್ಯೆ ಮಲ್ಲಮ್ಮ ಶರಣಪ್ಪ ಜಮಾದಾರ ಕೋರಿದರು. ಮೋಮಿನಪುರ ಪ್ರದೇಶದಲ್ಲಿ ಉರ್ದು ಶಾಲೆಯಲ್ಲಿ ಹೊಸದಾಗಿ ನಿರ್ಮಿಸಲಾದ 5 ಕೋಣೆ , ಶೌಚಾಲಯ ಕೆಡವಿ ಮತ್ತೆ ಹೊಸ ಕಟ್ಟಡ ಕಟ್ಟಲು ಮುಂದಾಗಿದ್ದು, ತನಿಖೆ ನಡೆಸಿ ಎಂದು ಸ್ಥಳೀಯ ನಿವಾಸಿ ಎಸ್.ಎಂ.ಫೆರೋಜ್ ಜಂಜನಿ ಅವರು ಅಹವಾಲು ಆಲಿಕೆಯಲ್ಲಿ ಲೋಕಾಯುಕ್ತಕ್ಕೆ ದೂರು ನೀಡಿದರು.
ಈ ಸಂದರ್ಭದಲ್ಲಿ ಲೋಕಾಯುಕ್ಯ ಸಂಸ್ಥೆಯ ಪೊಲೀಸ್ ಇನ್ಸ್ಪೆಕ್ಟರ್ ಗಳಾದ ನಾನೇಗೌಡ ಪಾಟೀಲ, ಧೃವತಾರಾ, ಜಿ.ಪಂ ಉಪ ಕಾರ್ಯದರ್ಶಿ ಬಿ.ಎಸ್.ರಾಠೋಡ, ಮುಖ್ಯ ಯೋಜನಾಧಿಕಾರಿ ಕಿಶೋರಕುಮಾರ ದುಭೆ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು, ಲೋಕಾಯುಕ್ತ ಸಂಸ್ಥೆಯ ಸಿಬ್ಬಂದಿಗಳಾದ ಬಸವರಾಜ ಪರೀಟ್, ಸಿದ್ಧಲಿಂಗಪ್ಪ, ರಾಣೋಜಿ, ಮಲ್ಲಿಕಾರ್ಜುನ ಇದ್ದರು.

LEAVE A REPLY

Please enter your comment!
Please enter your name here