ಕಲಬುರ್ಗಿ, ಮೇ.13- 545 ಪಿಎಸ್‌ಐ ಹುದ್ದೆಗಳ ನೇಮಕಾತಿ ಪರೀಕ್ಷೆ ಅಕ್ರಮದಲ್ಲಿ ಪ್ರಕರಣದ ಪ್ರಮುಖ ಆರೋಪಿ ನೀರಾವರಿ ಇಲಾಖೆಯ ಸಹಾಯಕ ಅಭಿಯಂತರ ಮಂಜುನಾಥ್ ಮೇಳಕುಂದಿ ವಿಚಾರಣೆಯನ್ನು ಸಿಐಡಿ ಪೋಲಿಸರು ತೀವ್ರಗೊಳಿಸಿದ್ದು, ಬಗೆದಷ್ಟು ಅಕ್ರಮಗಳು ಬಹಿರಂಗಗೊಳ್ಳುತ್ತಿವೆ.
ಇತ್ತೀಚೆಗಷ್ಟೇ ತನ್ನ ಮೊಬೈಲ್‌ನ್ನು ಆಳಂದ್‌ದ ಅಮರ್ಜಾ ಆಣೆಕಟ್ಟೆಯ ನೀರಿನಲ್ಲಿ ಎಸೆದ ಕುರಿತು ವಿಚಾರಣೆಯ ವೇಳೆ ಬಾಯಿ ಬಿಟ್ಟಿದ್ದರಿಂದ ಸಿಐಡಿ ಪೋಲಿಸರು ಮಂಜುನಾಥ್ ಮೇಳಕುಂದಿಯನ್ನು ಆ ಸ್ಥಳಕ್ಕೆ ಕರೆದುಕೊಂಡು ಹೋಗಿ ಸ್ಥಳ ಮಹಜರು ಮಾಡಲಾಗಿತ್ತು. ಅಷ್ಟೇ ಅಲ್ಲದೇ ಆತ ಎಸೆದ ಮೊಬೈಲ್‌ನ್ನು ಈಜು ಪ್ರವೀಣರಿಂದ ಶೋಧ ಮಾಡಲಾಗಿತ್ತು.
ಈಗ ಆ ಸಂಗತಿ ಇನ್ನೂ ತನಿಖೆಯ ಹಂತದಲ್ಲಿ ಇರುವಾಗಲೇ ಮಂಜುನಾಥ್ ಮೇಳಕುಂದಿ ಓಎಂಆರ್ ಶೀಟ್‌ಗಳು ಎಲ್ಲಿ ಸಿಐಡಿ ತನಿಖಾ ತಂಡಕ್ಕೆ ಸಿಗುತ್ತವೆ ಎಂಬ ಕಾರಣದಿಂದ ಸಿಐಡಿಗೆ ಶರಣಾಗುವ ಮುನ್ನವೇ ಸಾಕ್ಷಿ ನಾಶಕ್ಕಾಗಿ ಓಎಂಆರ್ ಶೀಟ್‌ಗಳನ್ನು ನದಿಯ ಕಾಲುವೆ ನೀರಿನಲ್ಲಿ ಎಸೆದಿದ್ದಾಗಿ ಬಾಯಿ ಬಿಟ್ಟಿದ್ದ. ಇದರಿಂದಾಗಿ ಸಿಐಡಿ ಪೋಲಿಸರು ಆತನಿಗೆ ವಿಚಾರಣೆಗೆ ಒಳಪಡಿಸಿದಾಗ ಸಂಪೂರ್ಣ ಮಾಹಿತಿ ನೀಡಿದ.
ಅದರಂತೆಯೇ ನಗರದ ಹೊರವಲಯದಲ್ಲಿರುವ ಕೋಟನೂರ್ (ಡಿ) ಬಳಿ ಇರುವ ಭೀಮಾ ನದಿಯ ದೊಡ್ಡ ಕಾಲುವೆಯ ನೀರಿನಲ್ಲಿ ಓಎಂಆರ್ ಶೀಟ್‌ಗಳನ್ನು ಎಸೆದ ಕುರಿತು ಸಿಐಡಿ ತನಿಖಾ ತಂಡವು ಸ್ಥಳಕ್ಕೆ ಕರೆದುಕೊಂಡು ಹೋಗಿ ಮಹಜರು ಮಾಡಿದಾಗ ಮಂಜುನಾಥ್ ಮೇಳಕುಂದಿ ಬಾಯಿಬಿಟ್ಟಿದ್ದಾನೆ.
ಪಿಎಸ್‌ಐ ನೇಮಕಾತಿ ಪರೀಕ್ಷೆ ಅಕ್ರಮ ಪ್ರಕರಣದಲ್ಲಿ ತನ್ನ ಹೆಸರು ಕೇಳಿ ಬಂದ ತಕ್ಷಣವೇ ಪರಾರಿಯಾಗಿದ್ದ ಮೇಳಕುಂದಿ, ಕೊನೆಗೆ ತಾನೇ ಸಿಐಡಿ ಕಚೇರಿಗೆ ಶರಣಾಗುವ ಮುನ್ನ ತನಗೆ ಅನಾರೋಗ್ಯ ಇದ್ದುದರಿಂದ ಮಂಗಳೂರಿಗೆ ಹೋಗಿದ್ದ ಎಂದು ಸುಳ್ಳು ಹೇಳಿಕೆ ನೀಡಿದ್ದ. ಆದಾಗ್ಯೂ, ಪರಾರಿಯಾದ ಸಂದರ್ಭದಲ್ಲಿಯೇ ಸಾಕ್ಷಿ ನಾಶ ಪಡಿಸಲು ಮೇಳಕುಂದಿ ಮಾಡಿದ ಮತ್ತೆರಡು ಅಕ್ರಮಗಳು ಸಿಐಡಿ ತನಿಖಾ ತಂಡಕ್ಕೆ ಬಯಲಾಗಿವೆ.
ಈಗ ಮೇಳಕುಂದಿ ಮೊಬೈಲ್‌ನಿಂದ ಇನ್ನಷ್ಟು ಮಾಹಿತಿ ದೊರೆಯುವ ಸಾಧ್ಯತೆ ಇದೆ. ಓಎಂಆರ್ ಶೀಟ್‌ಗಳಂತೂ ಸಿಗಲಾರದು. ಆದಾಗ್ಯೂ, ಮಾಡಿದ ಒಂದು ತಪ್ಪು ಮುಚ್ಚಿಕೊಳ್ಳಲು ಹೋಗಿ ಮೇಳಕುಂದಿ ಮತ್ತೆ, ಮತ್ತೆ ತಪ್ಪು ಮಾಡುತ್ತಿರುವುದು ಬಹಿರಂಗಗೊoಡಿದೆ.