ಕಲಬುರಗಿ, ನ. 16: ಈ ಬಾರಿಯ ಸಿದ್ದಶ್ರೀ ಪ್ರಶಸ್ತಿಯನ್ನು ಮರಣೋತ್ತರವಾಗಿ ಇತ್ತೀಚೆಗೆ ನಿಧನರಾದ ಚಿತ್ರನಟ ಪುನಿತ್ ರಾಜ್ ಕುಮಾರ್ ಅವರಿಗೆ ನೀಡಲು ತೀರ್ಮಾನಿಸಲಾಗಿದೆ ಎಂದು ಗುರುವಂದನಾ ಕಾರ್ಯಕ್ರಮದ ಸ್ವಾಗತ ಸಮಿತಿಯ ಗೌರವಾಧ್ಯಕ್ಷ ವೀರಮಹಾಂತ ಶಿವಾಚಾರ್ಯರು ಪ್ರಕಟಿಸಿದ್ದಾರೆ.
ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತ ಕಲಬುರಗಿಯ ಜಿಡಗಾ ಮಠದ ಶ್ರೀ ಮುರುಘರಾಜೇಂದ್ರ ಸ್ವಾಮಿಗಳ ಗುರುವಂದನಾ ಕಾರ್ಯಕ್ರಮದ ನಿಮಿತ್ಯ ಕೊಡಮಾಡುವ ಸಿದ್ದಶ್ರೀ ಪ್ರಶಸ್ತಿ ರಾಷ್ಟ್ರಮಟ್ಟದ ಸಿದ್ದಶ್ರೀ ಪ್ರಶಸ್ತಿಗಳು ಈ ಹಿಂದೆ ಪಂ ಪುಟ್ಟರಾಜ ಗವಾಯಿ, ಪ್ರಭಾಕರ ಕೋರೆ, ಶಿವಕುಮಾರ ಸ್ವಾಮಿಜಿ, ರವಿಶಂಕರ ಗುರುಜಿ, ಬಾಬಾ ರಾಮದೇವ ಅವರಿಗೆ ನೀಡಲಾಗಿತ್ತು.
ಮರಣೋತ್ತರವಾಗಿ ನೀಡಲಾಗುತ್ತಿರು ಈ ಪ್ರಶಸ್ತಿಯ ಬಗ್ಗೆ ಈಗಾಗಲೇ ಪುನಿತ್ ರಾಜಕುಮಾರ ಕುಟುಂಬದವರನ್ನ ಸಂಪರ್ಕಿಸಿ ಮಾಹಿತಿ ನೀಡಲಾಗಿದೆ ಎಂದ ಅವರು ಪುನಿತ್ ರಾಜಕುಮಾರ ಅವರಿಗೆ ಕಳೆದ ಬಾರಿಯೇ ಸಿದ್ದಶ್ರೀ ನೀಡಲು ತೀರ್ಮಾನಿಸಲಾಗಿತ್ತು, ಆದ್ರೆ ಕೋವಿಡ್ ಕಾರಣ ಕಾರ್ಯಕ್ರಮ ರದ್ದುಪಡಿಸಲಾಗಿತ್ತು, ಆದ್ರೆ ಜೀವಿತ ಕಾಲದಲ್ಲಿ ನೀಡಲಾಗದ ಈ ಪ್ರಶಸ್ತಿ ದುರದೃಷ್ಟಾವಶಾತ್ ಈಗ ಪುನಿತ್ ರಾಜಕುಮಾರ ಅವರಿಗೆ ಮರಣೋತ್ತರವಾಗಿ ನೀಡಲಾಗುತ್ತಿದೆ ಎಂದರು.