ಕಲಬುರಗಿ,ಜು.7:ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ಕೈಗಾರಿಕಾ ಕ್ರಾಂತಿ ಮಾಡಲು ಸರ್ಕಾರ ಅತೀವ ಆಸಕ್ತಿ ಹೊಂದಿದೆ. ಈ ಭಾಗದಲ್ಲಿ ಉದ್ಯಮಿಗಳು ಹೆಚ್ಚಿನ ಹೂಡಿಕೆ ಮಾಡಿ ಉದ್ಯೋಗ ಸೃಷ್ಠಿಗೆ ಒತ್ತು ನೀಡಲಾಗುತ್ತಿದ್ದು, ಇದಕ್ಕಾಗಿ ಶೀಘ್ರದಲ್ಲಿಯೇ ಕಲಬುರಗಿಯಲ್ಲಿ ಪ್ರದೇಶಕ್ಕೆ ಸೀಮಿತವಾಗುವಂತೆ “ಹೂಡಿಕೆದಾರರ ಸಮಾವೇಶ” ಏರ್ಪಡಿಸಲಾಗುವುದು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಸಾರ್ವಜನಿಕ ಉದ್ದಿಮೆಗಳ ಸಚಿವ ಜಗದೀಶ್ ಶೆಟ್ಟರ್ ಹೇಳಿದರು.
ಅವರು ಬುಧವಾರ ಇಲ್ಲಿನ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲೆಯ ಜನಪ್ರತಿನಿಧಿಗಳು, ಕೈಗಾರಿಕೋದ್ಯಮಿಗಳು ಹಾಗೂ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ಅಧಿಕಾರಿಗಳೊಂದಿಗೆ ಸಂವಾದದಲ್ಲಿ ಭಾಗವಹಿಸಿ ಮಾತನಾಡಿದರು.
ಕೈಗಾರಿಕೆಗಳು ಬೆಂಗಳೂರನ್ನೆ ಕೇಂದ್ರೀಕೃತವಾಗಿಸಿಕೊಳ್ಳದೆ ರಾಜ್ಯದ ಉದ್ದಗಲಕ್ಕೂ ಕೈಗಾರಿಕೆ ಸ್ಥಾಪನೆಯಾಗಿ ಉದ್ಯೋಗ ಸೃಷ್ಠಿಯಾಗಬೇಕೆಂಬುದು ಸರ್ಕಾರದ ಮಹದಾಸೆ. ಇದಕ್ಕೆ ಪೂರ್ವಕವಾಗಿ ಕೈಗಾರಿಕಾ ಸ್ನೇಹಿ ಕೈಗಾರಿಕಾ ನೀತಿ 2020-25 ಜಾರಿಗೆ ತಂದು ಬೆಂಗಳೂರುದಾಚೆಗೆ ಎರಡನೇ ಮತ್ತು ಮೂರನೇ ಹಂತದ ನಗರಗಳಲ್ಲಿ ಹೂಡಿಕೆಗೆ ಉದ್ಯಮಿಗಳಿಗೆ ಕಡಿಮೆ ತೆರಿಗೆ, ಹೆಚ್ಚಿನ ಸಬ್ಸಿಡಿದಂತಹ ಅವಕಾಶಗಳನ್ನು ನೀಡಲಾಗಿದೆ ಎಂದರು.
ಇದಲ್ಲದೆ ತಾಲೂಕಾ ಹಂತದಲ್ಲಿಯೂ ಕೆ.ಎಸ್.ಎಸ್.ಐ.ಡಿ.ಸಿ.ಯಿಂದ ಸಣ್ಣ ಕೈಗಾರಿಕೆ ಸ್ಥಾಪನೆಗೂ ಒತ್ತು ನೀಡಲಾಗಿದೆ ಎಂದ ಸಚಿವರು ಇತ್ತೀಚೆಗೆ ಉದ್ಯಮಿಗಳು ನೇರವಾಗಿ ರೈತರಿಂದಲೆ ಭೂಮಿ ಖರೀದಿಗೂ ಅನುಕೂಲವಾಗುವಂತೆ ಭೂ ಸುಧಾರಣೆ ಕಾಯ್ದೆಯಲ್ಲಿನ 79(ಎ)(ಬಿ) ಕಲಂ ತೆಗೆದುಹಾಕಲಾಗಿದೆ ಎಂದರು.
ಕಲಬುರಗಿಯ ನಂದೂರ-ಕೆಸರಟಗಿ ಕೈಗಾರಿಕಾ ಪ್ರದೇಶದಲ್ಲಿ ನಿವೇಶನಗಳ ದರ ಕಡಿಮೆ ಮಾಡಬೇಕೆಂಬ ಉದ್ದಿಮೆದಾರರ ಬೇಡಿಕೆ ಕುರಿತು ಮಾತನಾಡಿದ ಸಚಿವ ಜಗದೀಶ ಶೆಟ್ಟರ ಅವರು ಇದೇ ರೀತಿಯ ಬೇಡಿಕೆಗಳು ಮೈಸೂರು, ತುಮಕೂರು ಹಾಗೂ ಹುಬ್ಬಳ್ಳಿ-ಧಾರವಾಡಗಳಿಂದಲೂ ಬಂದಿವೆ. ಈ ನಿಟ್ಟಿನಲ್ಲಿ ಶೀಘ್ರದಲ್ಲೇ ಬೆಂಗಳೂರಿನಲ್ಲಿ ಕೆ.ಐ.ಎ.ಡಿ.ಬಿ. ಉನ್ನತ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು. ಕಪನೂರು ಕೈಗಾರಿಕಾ ಪ್ರದೇಶದ 3ನೇ ಹಂತದಲ್ಲಿ ಈ ಹಿಂದೆ “ದಾಲ್ ಪಾರ್ಕ್” ಸ್ಥಾಪನೆಗೆ 100 ಎಕರೆ ಜಮೀನು ನೀಡಲಾಗಿತ್ತು. ಆದರೆ ದಾಲ್ ಉದ್ಯಮಿಗಳು ಉದ್ಯಮ ನಡೆಸದೆ ಸದರಿ ಜಮೀನು ವಾಪಸ್ಸು ಮಾಡಿದ್ದು, ಈ 100 ಎಕರೆ ಜಮೀನಿನಲ್ಲಿ ಕೈಗಾರಿಕೆ ಪ್ರದೇಶಾವೃದ್ಧಿ ಮಾಡಿ ಉದ್ಯಮಿಗಳಿಗೆ ನಿವೇಶನಗಳನ್ನು ಮಾರಾಟ ಮಾಡಲಾಗುವುದು ಎಂದರು.
ಕಳೆದ ಜುಲೈ 2019 ರಿಂದ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಕಲ್ಯಾಣ ಕರ್ನಾಟಕ ಪ್ರದೇಶದ ರಾಯಚೂರು ಜಿಲ್ಲೆಯಲ್ಲಿ 1 ಯೋಜನೆಗೆ 32.03 ಕೋಟಿ ರೂ. ಬೀದರ ಜಿಲ್ಲೆಯಲ್ಲಿ 3 ಯೋಜನೆಗೆ 47.61 ಕೋಟಿ ರೂ, ಯಾದಗಿರಿ ಜಿಲ್ಲೆಯಲ್ಲಿ 62 ಯೋಜನೆಗೆ 2531.73 ಕೋಟಿ ರೂ. ಹಾಗೂ ಕಲಬುರಗಿ ಜಿಲ್ಲೆಯಲ್ಲಿ 2 ಯೋಜನೆಗೆ 511.5 ಕೋಟಿ ರೂ. ಹೀಗೆ ಒಟ್ಟು 68 ಯೋಜನೆಗಳಿಂದ 3122.87 ಕೋಟಿ ರೂ. ಹೂಡಿಕೆಯಾಗಿ 10621 ಜನರಿಗೆ ಉದ್ಯೋಗ ದೊರೆತಿದೆ ಎಂದರು.
ಹೈದ್ರಾಬಾದ್ ರೋಡ್ ಶೋ ಪರಿಣಾಮ ಯಾದಗಿರಿಯ ಕಡೆಚೂರಿನ 3000 ಎಕರೆ ಕೈಗಾರಿಕಾ ಪ್ರದೇಶದಲ್ಲಿ ಇತ್ತೀಚೆಗೆ 62 ಉದ್ಯಮಗಳು ಸ್ಥಾಪನೆಗೆ ಮುಂದೆ ಬಂದಿವೆ. ಇದರಿಂದ 2531 ಕೋಟಿ ಹೂಡಿಕೆಯಾಗುತ್ತಿದ್ದು, 10 ಸಾವಿರ ಜನರಿಗೆ ಉದ್ಯೋಗ ಸಿಗಲಿದೆ. ಇಲ್ಲಿ 1000 ಎಕರೆ ಪ್ರದೇಶವನ್ನು “ಫಾರ್ಮ ಪಾರ್ಕ್” ಸ್ಥಾಪನೆಗೆ ಮೀಸಲಿಡಲಾಗಿದೆ. ಕೇಂದ್ರ ನೆರವಿನಿಂದ ಫಾರ್ಮಾ ಪಾರ್ಕ್ ಸ್ಥಾಪನೆಗೆ ಕೇಂದ್ರ ರಸಾಯನಿಕ ಹಾಗೂ ರಸಗೊಬ್ಬರ ಖಾತೆ ಸಚಿವ ಡಿ.ವಿ.ಸದಾನಂದಗೌಡ ಅವರೊಂದಿಗೆ ಸತತ ಸಂಪರ್ಕದಲ್ಲಿದ್ದೇವೆ ಎಂದರು.
ಕೊಪ್ಪಳ ಜಿಲ್ಲೆಯಲ್ಲಿ 400 ಎಕರೆ ಪ್ರದೇಶದಲ್ಲಿ “ಟಾಯ್ಸ್ ಕ್ಲಸ್ಟರ್” ಸ್ಥಾಪನೆಗೆ ಈಗಾಗಲೆ ಚಾಲನೆ ನೀಡಿದ್ದು, 5000 ಕೋಟಿ ರೂ. ಹೂಡಿಕೆಯಾಗಲಿದೆ. 10 ಸಾವಿರ ಜನರಿಗೆ ಉದ್ಯೋಗ ಸಿಗಲಿದೆ ಎಂದು ಸಚಿವ ಜಗದೀಶ ಶೆಟ್ಟರ ತಿಳಿಸಿದರು.
600 ಎಕರೆ ಪ್ರದೇಶಾಭಿವೃದ್ಧಿ: ಕಲಬುರಗಿಯ ನಂದೂರ-ಕೆಸರಟಗಿ ಕೈಗಾರಿಕಾ ಪ್ರದೇಶದಲ್ಲಿ 3ನೇ ಹಂತದಲ್ಲಿ ಹೊಸದಾಗಿ 600 ಎಕರೆ ಕೈಗಾರಿಕೆ ಪ್ರದೇಶವನ್ನು ಅಭಿವೃದ್ಧಿಪಡಿಲಾಗುತ್ತಿದೆ ಎಂದರು.
ಪ್ರತಿ ತಿಂಗಳು ಸಿಂಗಲ್ ವಿಂಡೋ ಮೀಟಿಂಗ್ ನಡೆಯಲಿ: ಜಿಲ್ಲೆಯಲ್ಲಿ ಪ್ರತಿ ತಿಂಗಳು ಕೈಗಾರಿಕೆಗಳ ಸ್ಥಾಪನೆಗೆ ಅನುಮೋದನೆ ಮತ್ತು ಶಿಫಾರಸ್ಸು ಮಾಡಲು ಜರುಗುವ ಸಿಂಗಲ್ ವಿಂಡೋ ಮೀಟಿಂಗ್ ನಡೆಯುತ್ತಿಲ್ಲ, ನಮ್ಮ ಸಮಸ್ಯೆ ಬಗೆಹರಿಯುತ್ತಿಲ್ಲ ಎಂದು ಸಂವಾದದಲ್ಲಿ ಉದ್ಯಮಿಗಳು ಸಚಿವರ ಮುಂದೆ ಅಳಲು ತೋರಿಕೊಂಡರು. ಇದಕ್ಕೆ ಸ್ಪಂದಿಸಿದ ಸಚಿವ ಜಗದೀಶ್ ಶೆಟ್ಟರ್ ಅವರು ಇನ್ನು ಮುಂದೆ ಪ್ರತಿ ತಿಂಗಳು ಸಿಂಗಲ್ ವಿಂಡೋ ಮೀಟಿಂಗ್ ನಡೆಸಿ ಕೈಗಾರಿಕೋದ್ಯಮಿಗಳ ಸಮಸ್ಯೆಗಳನ್ನು ಬಗೆಹರಿಸಬೇಕು ಎಂದು ಜಿಲ್ಲಾಧಿಕಾರಿ ವಿ.ವಿ.ಜ್ಯೋತ್ಸಾö್ನ ಮತ್ತು ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಮಾಣಿಕರಾವ ವಿ. ರಘೋಜಿ ಅವರಿಗೆ ನಿರ್ದೇಶನ ನೀಡಿದರು.
ಕೈಗಾರಿಕಾ ಪ್ರದೇಶದಲ್ಲಿನ ಮನೆ ತೆರವುಗೊಳಿಸಲು ಸೂಚನೆ: ಆಳಂದ ಪಟ್ಟಣದಲ್ಲಿ ಕೆ.ಎಸ್.ಎಸ್.ಐ.ಡಿ.ಸಿ. ನಿಗಮ ಅಭಿವೃದ್ಧಿಪಡಿಸಿದ 10 ಎಕರೆ ಕೈಗಾರಿಕಾ ವಸಾಹತು ಪ್ರದೇಶದಲ್ಲಿ 7 ಎಕರೆಯಲ್ಲಿ ಕೈಗಾರಿಕೆಗಳು ಸ್ಥಾಪನೆಯಾಗಿದ್ದು, ಉಳಿದ 3 ಎಕರೆ ಪ್ರದೇಶದಲ್ಲಿ ಮನೆಗಳನ್ನು ನಿರ್ಮಿಸುವ ಮೂಲಕ ಜಮೀನು ಅತಿಕ್ರಮಣವಾಗಿದೆ ಎಂದು ಉದ್ಯಮಿ ಕುಪೇಂದ್ರ ಧೂಳೆ ಅವರು ಸಚಿವರ ಗಮನಕ್ಕೆ ತಂದರು. ಇದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಸಚಿವ ಜಗದೀಶ ಶೆಟ್ಟರ ಕೈಗಾರಿಕಾ ಪ್ರದೇಶದಲ್ಲಿ ನಿಯಮಾವಳಿಯಂತೆ ಕೈಗಾರಿಕೆ ಬಿಟ್ಟು ಮನೆ ನಿರ್ಮಿಸುವಂತಿಲ್ಲ. ಕೂಡಲೆ ಅತಿಕ್ರಮಣವನ್ನು ತೆರವುಗೊಳಿಸಿ ವರದಿ ನೀಡುವಂತೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು. ಇದಲ್ಲದೆ ಕಲಬುರಗಿಯ ಕಪನೂರ ಮತ್ತು ನಂದೂರ ಕೈಗಾರಿಕಾ ಪ್ರದೇಶದಲ್ಲಿಯೂ ಮೂಲಸೌಕರ್ಯ ಕಾಮಗಾರಿ ಕಳಪೆಯಾಗಿದೆ ಎಂಬ ಆರೋಪ ಹಿನ್ನೆಲೆಯಲ್ಲಿ ಇಲ್ಲಿಯೂ ತನಿಖೆ ಮಾಡಿ ವರದಿ ನೀಡುವಂತೆ ಕೆ.ಐ.ಎ.ಡಿ.ಬಿ. ಅಧಿಕಾರಿಗಳಿಗೆ ಸಚಿವರು ಸೂಚಿಸಿದರು.
ಗಣಿ ಮತ್ತು ಭೂ ವಿಜ್ಞಾನ ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಮುರುಗೇಶ ನಿರಾಣಿ ಅವರು ಮಾತನಾಡಿ ಕಲಬುರಗಿಯಲ್ಲಿ 100 ಎಕರೆ ಪ್ರದೇಶದಲ್ಲಿ “ಜೆವಲ್ಲರಿ ಪಾರ್ಕ್” ಸ್ಥಾಪನೆಗೆ ಚಿಂತನೆ ನಡೆದಿದ್ದು, ಕೇಂದ್ರ ಹಣಕಾಸು ಸಚಿವರಿಂದ ತೆರಿಗೆ ವಿನಾಯಿತಿ ದೊರಕಿಸಿಕೊಡಬೇಕು ಎಂದು ಸಚಿವ ಜಗದೀಶ ಶೆಟ್ಟರ್ ಅವರಲ್ಲಿ ಮನವಿ ಮಾಡಿಕೊಂಡರು.
ಕಲಬುರಗಿ-2050 ವಿಜನ್ ಇಟ್ಟುಕೊಂಡು ಜಿಲ್ಲೆಯಲ್ಲಿ ಪ್ರಗತಿಯ ಹೆಜ್ಜೆ ಇಡಲಾಗುತ್ತಿದೆ. ಕೈಗಾರಿಕೆ ಮತ್ತು ಶಿಕ್ಷಣದಿಂದ ಮಾತ್ರ ಪ್ರದೇಶಾಭಿವೃದ್ಧಿ ಸಾಧ್ಯ. ಹೀಗಾಗಿ ಹಿಂದುಳಿದ ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ಕೈಗಾರಿಕಾ ಕ್ರಾಂತಿಗೆ ಇಲ್ಲಿನ ಉದ್ದಿಮೆದಾರರಿಗೆ ಹೆಚ್ಚಿನ ಸಬ್ಸಿಡಿ ನೀಡಬೇಕು ಮತ್ತು ಸ್ಕಿಲ್ ಇಂಡಿಯಾ, ಸ್ಟಾರ್ಟ್ ಅಪ್ ಇಂಡಿಯಾ ಹೀಗೆ ಕೇಂದ್ರ ಮತ್ತು ರಾಜ್ಯ ಸರ್ಕಾರದ ಹತ್ತು ಹಲವು ಕೈಗಾರಿಕಾ ಯೋಜನೆಗಳ ಬಗ್ಗೆ ಒಂದು ದಿನದ ಕಾರ್ಯಾಗಾರ ಕಲಬುರಗಿಯಲ್ಲಿ ಆಯೋಜಿಸಿ ಅರಿವು ಮೂಡಿಸಿದಲ್ಲಿ ಇಲ್ಲಿನ ಯುವ ಉದ್ದಿಮೆದಾರರಿಗೆ ಅನುಕೂಲವಾಗಲಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಕರ್ನಾಟಕ ವಿದಾನಸಭೆಯಲ್ಲಿನ ವಿರೋಧ ಪಕ್ಷದ ಮುಖ್ಯ ಸಚೇತಕರು ಹಾಗೂ ಜೇವರ್ಗಿ ಶಾಸಕ ಡಾ. ಅಜಯ ಸಿಂಗ್ ಅವರು ಮಾತನಾಡಿ ಜೇವರ್ಗಿಯಲ್ಲಿ 105 ಎಕರೆ ಪ್ರದೇಶದಲ್ಲಿ “ಫುಡ್ ಪಾರ್ಕ್” ಮಂಜೂರಾಗಿದ್ದು, ಇಲ್ಲಿ ಹೆಚ್ಚಿನ ಹೂಡಿಕೆಯಾಗುವಂತೆ ನೋಡಿಕೊಳ್ಳಬೇಕೆಂದು ಕೈಗಾರಿಕಾ ಸಚಿವರಲ್ಲಿ ಮನವಿ ಮಾಡಿದರು.
ಸಂವಾದದಲ್ಲಿ ಮಾತನಾಡಿದ ಹೆಚ್.ಕೆ.ಸಿ.ಸಿ.ಐ ಅಧ್ಯಕ್ಷ ಪ್ರಶಾಂತ ಎಸ್.ಮಾನಕರ ಕಲಬುರಗಿಯಲ್ಲಿ ಜೆವಲ್ಲರಿ ಪಾರ್ಕ್ ಸ್ಥಾಪನೆಗೆ ಸರ್ಕಾರ ಘೋಷಿಸಿರುವುದರಿಂದ ಸೇಡಂ ರಸ್ತೆಯಲಿ ಜಮೀನು ಸ್ವಾಧೀನ ಮಾಡಿಕೊಳ್ಳಬೇಕು, ಸೋಲಾರ್ ಎನರ್ಜಿಗೆ ಸಂಬAಧಿಸಿದAತೆ ಬಿಡಿ ಭಾಗಗಳ ಉತ್ಪನ್ನಗಳ ಘಟಕ ಸ್ಥಾಪನೆಗೆ ಕ್ರಮ ವಹಿಸಬೇಕು, ಆಳಂದ ರಸ್ತೆಯಲ್ಲಿ ಆಟೋ ನಗರ ಸೇರಿದಂತೆ ಹೊಸ ಕೈಗಾರಿಕಾ ಪ್ರದೇಶ ಅಭಿವೃದ್ಧಿಗೊಳಿಸಬೇಕು ಎಂದು ಮನವಿ ಮಾಡಿಕೊಂಡರು. ಮಾಜಿ ಹೆಚ್.ಕೆ.ಸಿ.ಸಿ.ಐ. ಅಧ್ಯಕ್ಷ ಉದ್ಯಮಿ ಸುರೇಶ ನಂದ್ಯಾಳ ಸೇರಿದಂತೆ ಇನ್ನಿತರ ಉದ್ಯಮಿದಾರರು ನಂದೂರ-ಕೆಸರಟಗಿ ಪ್ರದೇಶದಲ್ಲಿ ನಿವೇಶನ ದರ ಕಡಿಮೆ ಮಡಬೇಕು ಮತ್ತು ಇಲ್ಲಿ ನಿವೇಶನ ನೋಂದಣಿಗೆ ಆಗುತ್ತಿರುವ ತೊಂದರೆಗಳನ್ನು ನಿವಾರಿಸಬೇಕು ಎಂದರು.
ಸAವಾದದಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷ ಹಾಗೂ ಕಲಬುರಗಿ ದಕ್ಷಿಣ ಶಾಸಕ ದತ್ತಾತ್ರೇಯ ಪಾಟೀಲ್ ರೇವೂರ, ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆಯ ಅಧ್ಯಕ್ಷ ಹಾಗೂ ಸೇಡಂ ಶಾಸಕ ರಾಜಕುಮಾರ ಪಾಟಿಲ ತೆಲ್ಕೂರ, ಶಾಸಕರಾದ ಎಂ.ವೈ.ಪಾಟೀಲ, ಬಸವರಾಜ ಮತ್ತಿಮೂಡ, ವಿಧಾನ ಪರಿಷತ್ತಿನ ಶಾಸಕರಾದ ಬಿ.ಜಿ.ಪಾಟೀಲ, ಶಶೀಲ ಜಿ. ನಮೋಶಿ, ಸುನೀಲ ವಲ್ಯಾಪುರೆ, ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯ ಸಿ.ಇ.ಓ ಡಾ. ಶಿವಶಂಕರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸಿಮಿ ಮರಿಯಮ್ ಜಾರ್ಜ್, ಡಿ.ಸಿ.ಪಿ. ಅಡ್ಡೂರು ಶ್ರೀನಿವಾಸಲು, ಜಿಲ್ಲಾ ಪಂಚಾಯತ್ ಸಿ.ಇ.ಓ. ಡಾ.ದಿಲೀಷ್ ಶಶಿ, ಕಲಬುರಗಿ ಮಹಾನಗರ ಪಾಲಿಕೆ ಆಯುಕ್ತ ಸ್ನೇಹಲ್ ಸುಧಾಕರ್ ಲೋಖಂಡೆ ಸೇರಿದಂತೆ ಇನ್ನಿತರ ಅಧಿಕಾರಿಗಳು, ಕೈಗಾರಿಕೋದ್ಯಮಿಗಳು ಭಾಗವಹಿಸಿದ್ದರು.