ಕಲಬುರಗಿ, ಅ. 1: ಕಲ್ಯಾಣ ಕರ್ನಾಟಕ ವಿಭಾಗ ಕೇಂದ್ರಸ್ಥಾನ ಕಲಬುರಗಿ ಜಿಲ್ಲೆಯ ವಿಧಾನ ಪರಿಷತ್ ಸದಸ್ಯರಾದ ಬಿ.ಜಿ.ಪಾಟೀಲ್ ಅವರಿಗೆ ಸಚಿವ ಸಂಪುಟದಲ್ಲಿ ಸ್ಥಾನ ಒದಗಿಸಿಕೊಡಬೇಕೆಂದು ಕಲ್ಯಾಣ ಕರ್ನಾಟಕ ಹಿಂದುಳಿದ ವರ್ಗಗಳ ಒಕ್ಕೂಟದ ಅಧ್ಯಕ್ಷರಾದ ಶಾಂತಪ್ಪ ಕೂಡಿ ಹಾಗೂ ಪ್ರಧಾನ ಕಾರ್ಯದರ್ಶಿಗಳಾದ ಸೂರ್ಯಕಾಂತ ಅವರಾ ಅವರುಗಳು ಆಗ್ರಹಿಸಿದ್ದಾರೆ.
ಅವರು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಗೂ ರಾಜ್ಯ ಬಿಜೆಪಿ ಅಧ್ಯಕ್ಷರಾದ ನಳಿನ್ ಕುಮಾರ ಕಟೀಲ್ ಅವರಲ್ಲಿ ಮತ್ತು ರಾಷ್ಟ್ರೀಯ ಅಧ್ಯಕ್ಷರಾದ ಜೆ.ಪಿ.ನಡ್ಡಾ ಅವರಲ್ಲಿ ಮತ್ತು ಕೇಂದ್ರ ಗೃಹ ಮಂತ್ರಿಗಳಾದ ಅಮಿತ್ ಷಾ ಅವರಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಬಿ.ಜಿ.ಪಾಟೀಲರಿಗೆ ಹಿಂದುಳಿದ ವರ್ಗದವರ ಬಗ್ಗೆ ಬಹಳ ಕಳಕಳಿಯುಳ್ಳವರು ಮತ್ತು ಲೋಕಸಭಾ ಚುನಾವಣೆಯಲ್ಲಿ ಹಿಂದುಳಿದ ವರ್ಗದವರ ಮತಗಳನ್ನು ಒಗ್ಗೂಡಿಸಲು ವಿವಿಧ ಎಸ್.ಸಿ, ಎಸ್.ಟಿ ಹಾಗೂ ಹಿಂದುಳಿದ ವರ್ಗಗಳ ಸಮಾವೇಶದ ನೇತೃತ್ವ ವಹಿಸಿ ಹಿಂದುಳಿದ ಮತಗಳನ್ನು ಒಗ್ಗೂಡಿಸಿ ಬಿಜೆಪಿಗೆ ಗೆಲುವು ತಂದು ಕೊಡುವಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ ಮತ್ತು ಕಲಬುರಗಿ ಉತ್ತರ ಮತಕ್ಷೇತ್ರದಲ್ಲಿ ಕೂಡಾ ಅನೇಕ ಸರ್ಕಾರದಿಂದ ಅನುದಾನ ತಂದು ಅಭಿವೃದ್ದಿಪಡಿಸಿದ್ದಾರೆ ಮತ್ತು ವಿಧಾನಪರಿಷತ್ತಿನ ವ್ಯಾಪ್ತಿಗಳಾದ ಕಲಬುರಗಿ, ಯಾದಗಿರಿ ಕ್ಷೇತ್ರದ ಜನಸಾಮಾನ್ಯರ, ರೈತರ ಪರವಾಗಿ ಅಭಿವೃದ್ಧಿಯತ್ತ ದಾಪುಗಾಲು ಹಾಕುತ್ತಾ ಜನಪರ ಕೆಲಸ ಮಾಡುತ್ತಿದ್ದಾರೆ ಮತ್ತು ಎಲ್ಲಾ ಜನಾಂಗದ ಸಾಮಾಜಿಕ ನ್ಯಾಯ ದೊರಕಿಸಿ ಕೊಡುವಲ್ಲಿ ಮುಂಚೂಣಿಯಲ್ಲಿದ್ದಾರೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ಕಲ್ಯಾಣ ಕರ್ನಾಟಕದ ಅನೇಕ ವಿವಿಧ ಹಿಂದುಳಿದ ಜನಾಂಗದ ಪಕ್ಷದ ಕಾರ್ಯಕರ್ತರನ್ನು ನಿಗಮ ಮಂಡಳಿಗೆ ನಾಮ ನಿರ್ದೇಶನ ಮಾಡಿ ಹಿಂದುಳಿದ ಜನಾಂಗದ ಕಾರ್ಯಕರ್ತರಿಗೆ ಸಾಮಾಜಿಕ ನ್ಯಾಯ ದೊರಕಿಸಿ ಕೊಡಬೇಕೆಂದು ಮನವಿ ಮಾಡಿಕೊಂಡಿದ್ದಾರೆ.